ಗೋರಖ್‌ಪುರ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರವೊಂದರಲ್ಲಿ ಗುರುವಾರ ಮತದಾನದ ವೇಳೆಯೂ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರವನ್ನು ಮುಂದುವರೆಸಿದ್ದಾರೆ.
ತಾನು ಭ್ರಷ್ಟ ಅಭ್ಯರ್ಥಿ, ದಯವಿಟ್ಟು ತನಗೆ ಮತ ನೀಡಿ. ತನ್ನ ಹೆಸರು ಅರುಣ್ ಕುಮಾರ್ ಆಗಿದ್ದು, ಭ್ರಷ್ಟನಾಗಿ ಉಳಿಯುತ್ತೇನೆ ಎಂದು ಭರವಸೆ ನೀಡುವುದಾಗಿ ಹೇಳಿದ್ದಾರೆ. ಸ್ವತಂತ್ರ ಅಭ್ಯರ್ಥಿಯ ಈ ವಿಚಿತ್ರ ಹೇಳಿಕೆಯು ಮತದಾರರನ್ನು ಅಚ್ಚರಿಗೊಳಿಸಿದೆ.
ಗೋರಖ್‌ಪುರದ ಪಿಪ್ರೈಚ್ ಸ್ಥಾನದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್, ತಮ್ಮ ಠೇವಣಿ ಉಳಿಸುವುದಕ್ಕಾಗಿ ಪ್ರತಿ ಕುಟುಂಬಕ್ಕೆ ಒಂದು ಮತವನ್ನು ಮಾತ್ರ ಚಲಾಯಿಸುವಂತೆ ಮತದಾರರನ್ನು ಕೋರಿದ್ದಾರೆ.
ಚುನಾವಣಾ ಚಿಹ್ನೆ ಶೂ, ನೀವೆಲ್ಲರೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ ಹಾಕಿದ್ದೀರಿ. ಆದರೆ, ಈ ಬಾರಿ ಭ್ರಷ್ಟಾಚಾರಕ್ಕೆ ಒಂದು ಮತ ನೀಡಿ ಎಂದು ಕೇಳಿಕೊಂಡಿದ್ದಾರೆ.
ಇನ್ನು ತಾನು ಯಾಕೆ ಚುನಾವಣೆಗೆ ಸ್ಪರ್ಧಿಸಿದೆ ಎಂಬ ಬಗ್ಗೆ ಅರುಣ್ ಮಾತನಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ, ಆ ಯೋಜನೆಗಳಲ್ಲಿ ಪೂರ್ವಾಂಚಲ್‌ನ ಕಾರ್ಮಿಕರಿಗೆ ಉದ್ಯೋಗ ಸಿಕ್ಕಿಲ್ಲ. ಇದಕ್ಕಾಗಿಯೇ ತಾನು ಚುನಾವಣೆ ಸ್ಪರ್ಧಿಸಿದ್ದಾಗಿ ಹೇಳಿದ್ದಾರೆ.
ಮತದಾರರು ಈ ಸ್ವತಂತ್ರ ಅಭ್ಯರ್ಥಿಯನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದಿರಬಹುದು. ಆದರೆ, ಅವರ ಪ್ರಚಾರದ ಶೈಲಿ ಮತ್ತು ಭ್ರಷ್ಟಾಚಾರದ ಬಗೆಗಿನ ಅರುಣ್ ಹೇಳಿಕೆ ಜನರನ್ನು ಆಶ್ಚರ್ಯಗೊಳಿಸಿದೆ.