ಮೈಸೂರು: ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣಾ ಪ್ರಚಾರ ತಂತ್ರ ಹಾಗೂ ಹೆಚ್ಚು ದಿನಗಳ ಕಾಲ ಪ್ರಚಾರಕ್ಕಾಗಿ ಆಗಮಿಸುತ್ತಿರುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವ ವಿ. ಸೋಮಣ್ಣ, ಪ್ರಚಾರ ಮಾಡುವುದು ಅವರ ಕರ್ತವ್ಯ, ಮಾಡುತ್ತಾರೆ ಎಂದರು.
ಹಿಂದೆ ಸಿದ್ದರಾಮಯ್ಯ ಹಾಗೂ ನಾನು ಜೊತೆಯಲ್ಲಿ ಕೆಲಸ ಮಾಡಿದವರು. ನಾನೇನು ಭೂತವೂ ಅಲ್ಲ, ಪಿಶಾಚಿಯೂ ಅಲ್ಲ. ನಾನೂ ಒಬ್ಬ ಮನುಷ್ಯ. ಸಿದ್ದರಾಮಯ್ಯ ನನಗಿಂತ ದೊಡ್ಡ ನಾಯಕರು. ಅವರು ಕ್ಷೇತ್ರದಲ್ಲಿ ಎಷ್ಟು ಬಾರಿ ಬೇಕಾದರೂ ಪ್ರಚಾರ ಮಾಡಲಿ ಅದರಿಂದ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಎಷ್ಟು ಬಾರಿ ಪ್ರಚಾರಕ್ಕೆ ಬಂದರೂ ನಾನ್ಯಾಕೆ ಅದನ್ನು ಪ್ರಶ್ನಿಸಿಸಲಿ? ಅವರು ಕ್ಷೇತ್ರಕ್ಕೆ ಹೆಚ್ಚು ಬರುವುದರಿಂದ ಮತದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂದರು.
ಬಿಜೆಪಿಯ ಲಿಂಗಾಯಿತ ಡ್ಯಾಂ ಒಡೆದಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ಡಿ.ಕೆ.ಶಿ ಹಗಲು ಕನಸು ಕಾಣುತ್ತಿದ್ದಾರೆ. ಲಿಂಗಾಯಿತರನ್ನು ಬೇರೆಯವರನ್ನೂ ಬಿಜೆಪಿ ಒಂದೇ ರೀತಿ ಕಾಣುತ್ತದೆ. ಇತಿಹಾಸವೇನು ಎಂಬುದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದರು.