ಹಾಸನ ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಯಾರಿಗೂ ಬೆಂಬಲ ನೀಡದೇ ತಟಸ್ಥನಾಗಿದ್ದೆ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ. ಪಕ್ಷದಿಂದ ಶಿಸ್ತು ಕ್ರಮ ವಿಚಾರವಾಗಿ ಬೇಸರ ಹೊರ ಹಾಕಿದ ಅವರು ನಾನು ಈಗಲೂ ಬಿಜೆಪಿಯಲ್ಲಿ ಇದ್ದೇನೆ ಎಂದು ಎನಿಸುತ್ತಿದೆ ಎಂದು ಹೇಳಿದ್ರು.
ಹಾಸನ ಜಿಲ್ಲೆಯ ಕೊಣನೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಎ. ಮಂಜು ನಾನು ಜನರ ಜೊತೆ ಇದ್ದೇನೆ, ಜನರು ನನ್ನ ಜೊತೆ ಇರುವವರೆಗೂ ಇರುತ್ತೇನೆ, ಅವರು ಬೇಡ ಎಂದಾಗ ರಾಜಕೀಯ ಬಿಡುತ್ತೇನೆ. ಹಾಸನದಿಂದ ನಾವು ನಮ್ಮ ಮಗನಿಗೆ ಎಂಎಲ್ಸಿ ಟಿಕೆಟ್ ಕೇಳಿರಲಿಲ್ಲ. ಆದರೆ ಟಿಕೆಟ್ ಕೊಡ್ತೀವಿ ಎಂದು ಪಕ್ಷದವರೇ ಹೇಳಿದ್ದರು. ಟಿಕೆಟ್ ಕೊಡುವ ವೇಳೆಯಲ್ಲಿ ಮಂಥರ್ ಗೌಡ ಇಲ್ಲಿ ಅಭ್ಯರ್ಥಿಯಾದರೆ ನಾನು ಐದು ಕೋಟಿ ಕೊಡ್ತೇನೆ ಎಂದು ಹೇಳಿದ್ದರು. ಹಾಸನದ ಬಿಜೆಪಿ ಶಾಸಕರೇ ಐದು ಕೋಟಿ ಬಂಡವಾಳವನ್ನು ಹಾಕುವ ಮಾತುಗಳನ್ನಾಡಿದ್ದರು.
ಆದರೆ ಚುನಾವಣೆ ಬಂದಾಗ ಮಂಥರ್ ಗೌಡ ಇಲ್ಲಿಗೇಕೆ ಬರಬೇಕು..? ನೀವು ವಿಧಾನಸಭೆಗೆ ಸ್ಪರ್ಧಿಸಿ ಅಪ್ಪ ಲೋಕಸಭಾ ಚುನಾವಣೆಗೆ ನಿಲ್ಲಲಿ ಎಂದು ಹೇಳಿದರು. ಹೀಗಾಗಿ ನನ್ನ ಮಗನಿಗೆ ಬೇಜಾರಾಗಿತ್ತು. ನನ್ನನ್ನು ಜವಾಬ್ದಾರಿಯಿಂದ ಮುಕ್ತನಾಗಿಸಿದ್ದ ಪುತ್ರನಿಗೆ ನಾನು ಆರ್ಥಿಕ ಬೆಂಬಲ ನೀಡಿದ್ದೆ. ಆದರೆ ಬಹಿರಂಗವಾಗಿ ಪಕ್ಷದ ವಿರುದ್ಧ ನಾನು ಕೊಡಗು ಹಾಗೂ ಹಾಸನಗಳೆಲ್ಲಿಯೂ ಕೆಲಸ ಮಾಡಿಲ್ಲ ಎಂದು ಹೇಳಿದ್ರು.
ಹಾಸನದ ಶಾಸಕರು ನಮ್ಮ ಕುಟುಂಬವನ್ನೇ ಒಡೆದು ಹಾಕಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಪ್ರೀತಂ ಗೌಡ ವಿರುದ್ಧ ಮಾಜಿ ಸಚಿವ ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ. ಅವರು ಪಕ್ಷದ ಸಭೆಯಲ್ಲಿಯೇ ಮಗನಿಗೆ ಟಿಕೆಟ್ ನೀಡುವ ಬಗ್ಗೆ ಮಾತನಾಡಿದ್ರು. ನಂತರ ಅವರ ಆಪ್ತರ ಮೂಲಕ ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿ ಕಳುಹಿಸಿದ್ರು. ಈ ಬೆಳವಣಿಗೆಯಿಂದ ನಮ್ಮ ಕುಟುಂಬದಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದರು.
ನನ್ನ ಮೇಲೆ ಶಿಸ್ತು ಕ್ರಮ ಎಂದು ಆದ ಬಳಿ ನಾನು ರವಿಕುಮಾರ್ ಬಿಟ್ಟು ಬೇರೆ ಯಾರೊಂದಿಗೂ ಮಾತನಾಡಿಲ್ಲ. ನನಗೆ ಶೋಕಾಸ್ ನೋಟಿಸ್ ನೀಡುವ ಅಧಿಕಾರ ಆತನಿಗಿಲ್ಲ. ನನಗೆ ನೋಟಿಸ್ ನೀಡೋಕೆ ಅವನು ಯಾರು..? ನನಗೆ ಹುದ್ದೆ ನೀಡಿದ್ದು ಅಧ್ಯಕ್ಷರು. ಅವರೇ ಹಿಂಪಡೆಯಲಿ. ನಾನು ಆತ್ಮಗೌರವ ಬಿಟ್ಟು ಯಾರೊಂದಿಗೂ ರಾಜಿ ಆದವನಲ್ಲ. ಆದರಿಂದ ಈ ಎಲ್ಲಾ ಬೆಳವಣಿಗೆಗಳಿಂದ ನನಗೆ ಖಂಡಿತ ಅವಮಾನವಾಗಿದೆ ಎಂದು ಹೇಳಿದ್ರು.