ನಾನು ಕಾಳಿ ಆರಾಧಕಿ. ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನಿಮ್ಮ ಗೂಂಡಾಗಳಿಗೂ ಹೆದರುವುದಿಲ್ಲ. ಪೊಲೀಸರ ಮೂಲಕ ಹಣಿಯಲು ಯತ್ನಿಸಬೇಡಿ. ಟ್ರೋಲ್ ಮುಖಾಂತರ ನನ್ನನ್ನು ಕುಗ್ಗಿಸಲಾರಿರಿ ಎಂದು ಟಿಎಂಸಿ ನಾಯಕಿ, ಸಂಸದೆ ಮಹುವಾ ಮೊಹಿತ್ರಾ ಹೇಳಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಕಾಳಿ ಸಿಗರೇಟ್ ಸೇದುತ್ತಿರುವಂತೆ ಸಾಕ್ಷ್ಯ ಚಿತ್ರ ನಿರ್ಮಿಸಿದ್ದ ಲೀನಾ ಮಣಿಮೇಕಲೈ ವಿರುದ್ಧ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಲೀನಾರನ್ನು ಬೆಂಬಲಿಸಿದ್ದ ಮಹುವಾ ಮೊಹಿತ್ರಾ, ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು.
ಅವರ ಈ ಹೇಳಿಕೆಯಿಂದ ಸ್ವಪಕ್ಷ ತೃಣ ಮೂಲ ಕಾಂಗ್ರೆಸ್ ಅಂತರ ಕಾಯ್ದುಕೊಂಡು ಇದು ಮಹುವಾ ಮೊಹಿತ್ರಾ ಅವರ ಸ್ವಂತ ಹೇಳಿಕೆ ಎಂದು ತಿಳಿಸಿತ್ತು. ಸಂಸದೆಯ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಹಿಂದೂ ಪರ ಸಂಘಟನೆಗಳು ಮಹುವಾ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಮಹುವಾ ಮೊಹಿತ್ರಾ, ನಿಮ್ಮ ಯಾವುದೇ ಬೆದರಿಕೆಗಳಿಗೆ ನಾನು ಅಂಜುವವಳಲ್ಲ ಎಂದು ತಿಳಿಸಿದ್ದಾರೆ.