ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ನಾಳೆ ಅಂತಿಮ ದಿನವಾಗಿದೆ. ಇದರ ಮಧ್ಯೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಯುವಕನೊಬ್ಬ ನಾಣ್ಯಗಳಲ್ಲಿ ಠೇವಣಿ ಪಾವತಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಯಾದಗಿರಿ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಾಮಸಮುದ್ರ ಗ್ರಾಮದ ಯಂಕಪ್ಪ ಮಂಗಳವಾರದಂದು ನಾಮಪತ್ರ ಸಲ್ಲಿಸಿದ್ದು, ಠೇವಣಿ ಹಣ 10,000 ರೂಪಾಯಿಗಳನ್ನು ನಾಣ್ಯಗಳಲ್ಲಿ ತಂದಿದ್ದರು. ಇದನ್ನು ನೋಡಿ ಒಂದು ಕ್ಷಣ ಅಚ್ಚರಿಗೊಂಡ ಚುನಾವಣಾ ವಿಭಾಗದ ಮೂವರು ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಎಣಿಕೆ ಮಾಡಿ ಬಳಿಕ ನಾಮಪತ್ರ ಸ್ವೀಕರಿಸಿದ್ದಾರೆ.
ಎಂಎ ಪದವೀಧರರಾಗಿರುವ ಯಂಕಪ್ಪ, ಬಡತನ ನಿರ್ಮೂಲನೆಯ ಕನಸು ಕಂಡಿದ್ದು ಕಳೆದ ಹತ್ತು ತಿಂಗಳಿಂದ ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 104 ಗ್ರಾಮ ಹಾಗೂ 12 ತಾಂಡಾಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮತದ ಜೊತೆಗೆ ಒಂದು ರೂಪಾಯಿ ನೀಡಿ ಎಂದು ಕೇಳಿದ್ದು, ಹೀಗೆ ಸಂಗ್ರಹವಾದ ಹತ್ತು ಸಾವಿರ ರೂಪಾಯಿಗಳನ್ನು ಠೇವಣಿಯಾಗಿ ಪಾವತಿಸಿದ್ದಾರೆ.