ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಕಂಡು ಬರುತ್ತಿದೆ. ನೂತನ ವರ್ಷದ ಆರಂಭ ಎಂದೇ ಹೇಳಲಾಗುವ ಯುಗಾದಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ಯುಗಾದಿ ಸಂದರ್ಭದಲ್ಲಿ ಖರೀದಿ ಭರಾಟೆಯೂ ಜೋರಾಗಿರುತ್ತದೆ. ಈಗಾಗಲೇ ಹೊಸ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿರುವ ಜನ ಹಬ್ಬದ ಸಂಭ್ರಮದಲ್ಲಿದ್ದಾರೆ.
ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಮನೆ ಮಂದಿಯೆಲ್ಲಾ ಸೇರಿ ವಿಶೇಷ ಭಕ್ಷ್ಯ ಭೋಜನ ಸವಿಯುವುದೇ ಸಂಭ್ರಮ. ಯುಗಾದಿ ಹಬ್ಬದಂದು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಬೇರೆ ಕಡೆ ನೆಲೆಸಿದವರೆಲ್ಲಾ ಊರಿಗೆ ಬರುತ್ತಾರೆ. ಕುಟುಂಬದವರೆಲ್ಲಾ ಸೇರಿ ಹಬ್ಬವನ್ನು ಆಚರಿಸುತ್ತಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿರುತ್ತದೆ. ಮಾವು, ಬೇವಿನ ಸೊಪ್ಪು ತಳಿರು ತೋರಣಗಳನ್ನು ಮನೆಗೆ ಕಟ್ಟಲಾಗುತ್ತದೆ. ಹಬ್ಬದ ಪ್ರಯುಕ್ತ ಮೊದಲೇ ಸುಣ್ಣ, ಬಣ್ಣ ಕಂಡಿದ್ದ ಮನೆಗಳ ಅಂದ ತಳಿರು- ತೋರಣಗಳಿಂದ ಇನ್ನಷ್ಟು ಚೆಂದವಾಗಿ ಕಾಣುತ್ತದೆ.
ಇದರೊಂದಿಗೆ ಹೊಸ ಬಟ್ಟೆ ಧರಿಸಿ, ಯುಗಾದಿ ಚಂದ್ರನನ್ನು ನೋಡಿ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ. ದೇವರ ದರ್ಶನ ಪಡೆಯುತ್ತಾರೆ.
ಬೇವು, ಬೆಲ್ಲ ಯುಗಾದಿಯ ವಿಶೇಷವಾಗಿದೆ. ಕಷ್ಟ, ಸುಖಗಳು ಬಂದಾಗ ಸಮನಾಗಿ ಸ್ವೀಕರಿಸುವುದನ್ನು ಕಲಿಯಬೇಕೆಂಬುದನ್ನು ಇದು ತಿಳಿಸುತ್ತದೆ.
ಯುಗಾದಿಯ ಮತ್ತೊಂದು ವಿಶೇಷವೆಂದರೆ, ಹೊಸ ಚಿಗುರು. ಚಳಿಗಾಲದಲ್ಲಿ ಬರಡಾಗಿದ್ದ ಮರಗಳೆಲ್ಲ ವಸಂತ ಮಾಸದಲ್ಲಿ ಚಿಗುರೊಡೆದು ಕಳೆಗಟ್ಟಿರುತ್ತವೆ.