alex Certify ನಾಡಿನಾದ್ಯಂತ ಇಂದು ʼಸಡಗರ – ಸಂಭ್ರಮʼದಿಂದ ನಾಗರ ಪಂಚಮಿ ಆಚರಣೆ; ನಿಮಗೆ ತಿಳಿದಿರಲಿ ಇದರ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಡಿನಾದ್ಯಂತ ಇಂದು ʼಸಡಗರ – ಸಂಭ್ರಮʼದಿಂದ ನಾಗರ ಪಂಚಮಿ ಆಚರಣೆ; ನಿಮಗೆ ತಿಳಿದಿರಲಿ ಇದರ ವಿಶೇಷತೆ

ಶ್ರಾವಣಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗಿದ್ದು, ಮೊದಲ ಹಬ್ಬ ನಾಗರ ಪಂಚಮಿ ಹಬ್ಬವನ್ನು ಇಂದು ರಾಜ್ಯದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬೆಳಗ್ಗೆಯಿಂದಲೇ ವಿವಿಧ ದೇವಸ್ಥಾನಗಳಲ್ಲಿ ಜನಜಂಗುಳಿ ಕಂಡುಬಂದಿತು. ಹಬ್ಬದ ಅಂಗವಾಗಿ ನಾಗರ ಕಲ್ಲು, ನಾಗ ಪ್ರತಿಮೆ ಹಾಗೂ ಹುತ್ತಕ್ಕೆ ಹಾಲೆರೆದು ಪೂಜಿಸಲಾಯಿತು. ಬಗೆಬಗೆಯ ತಂಬಿಟ್ಟು, ಉಂಡೆಗಳ ನೈವೇದ್ಯ ಸಲ್ಲಿಸುವ ಮೂಲಕ ವಿಶೇಷ ಪೂಜಾ ಕಾರ್ಯಗಳು ಭರದಿಂದ ನಡೆಯಿತು.

ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಹಿಳೆಯರು ನಾಗರ ಕಲ್ಲಿಗೆ ವಿವಿಧ ರೀತಿಯಲ್ಲಿ ಪೂಜಾ ಕಾರ್ಯ ಮಾಡುವುದರ ಮೂಲಕ ಭಕ್ತಿ ಭಾವ ಮೆರೆದರು. ಹಬ್ಬದ ಹಿನ್ನೆಲೆಯಲ್ಲಿ ನಾಗ ದೇವಸ್ಥಾನ ಹಾಗೂ ವಿವಿಧ ದೇವಾಲಯದಲ್ಲಿನ ನಾಗರ ಕಲ್ಲುಗಳಿಗೆ ವಿಶೇಷ ಪೂಜೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಾಗರಪಂಚಮಿ ಅಥವಾ ಪಂಚಮಿ ಹಬ್ಬ ವಿಶೇಷವಾಗಿ ಹಾವಿನ ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯ. ಆ ಹಾಲನ್ನು ನಾಗರ ಹಾವು ಸೇವಿಸುತ್ತದೆ ಎನ್ನುವುದು ಬಲವಾದ ನಂಬಿಕೆ. ಈ ಹಬ್ಬವನ್ನು ಶ್ರಾವಣಮಾಸ ಆರಂಭವಾದ 5ನೇ ದಿನಕ್ಕೆ ಆಚರಿಸುತ್ತಾರೆ. ಆಷಾಢ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗುವ ಮೊದಲ ವಾರದಲ್ಲಿ ಬರುವ ʼನಾಗರ ಪಂಚಮಿ ಹಬ್ಬವು ನಾಡಿಗೆ ದೊಡ್ಡದುʼ ಎನ್ನುವ ಮಾತಿದೆ. ಈ ಹಬ್ಬವನ್ನು ವಿಶೇಷವಾಗಿ ಮಹಿಳೆಯರ ಹಬ್ಬ ಎಂದು ಬಿಂಬಿಸಲಾಗಿದೆ.

ಜತೆಗೆ ನೂತನವಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ತವರಿಗೆ ಬಂದು ಪಂಚಮಿ ಹಬ್ಬವನ್ನು ಆಚರಿಸುವುದು ರೂಢಿ. ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂದು ಕರೆಯಲಾಗುತ್ತದೆ. ಇಂದು ತಂಗಿಯರು ತಮ್ಮ ಅಣ್ಣನಿಗೆ ಪ್ರೀತಿಯಿಂದ ಹಾರೈಸುವುದು. ಅಣ್ಣನಾದವನು ತಂಗಿಗೆ ಪ್ರೀತಿಯ ಪ್ರತೀಕವಾಗಿ ಉಡುಗೊರೆ ನೀಡುವುದು ಹಲವು ಕಡೆಗಳಲ್ಲಿ ಕಂಡು ಬರುವ ಆಚರಣೆಯಾಗಿದೆ.

ಇನ್ನು ಕೆಲವೆಡೆ ಈ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ. ಪಂಚಮಿ ಹಬ್ಬ ಜೋಕಾಲಿ ಹಬ್ಬವೆಂದೇ ಜನಜನಿತವಾಗಿದೆ. ಅಲ್ಲದೇ, ವಿಶೇಷ ಪೂಜಾ ಕೈಂಕರ್ಯಗಳು ಎಲ್ಲಡೆ ಸರ್ವೆಸಾಮಾನ್ಯ. ಇದರ ಜತೆಗೆ ಈ ಸಂಭ್ರಮದಲ್ಲಿ ಮನೆಯಲ್ಲಿ ಜೋಕಾಲಿ ಕಟ್ಟಿ ಜೀಕುವುದು ವಿಶಿಷ್ಟವಾಗಿದೆ.

ಹಬ್ಬಕ್ಕೆ ವಿಶೇಷವಾಗಿ ವಿವಿಧ ರೀತಿಯ ಉಂಡೆಗಳನ್ನು ಮಾಡಿರುತ್ತಾರೆ. ಶೇಂಗಾ ಉಂಡೆ, ಎಳ್ಳುಂಡೆ, ಕಡ್ಲಿ ಉಂಡೆ, ತಂಬಿಟ್ಟು, ಬೇಳೆ ಕಡಬು, ಬೂಂದಿ ಉಂಡೆ, ಡಾಣಿ ಉಂಡೆ ಹೀಗೆ ಬಗೆಬಗೆಯ ರುಚಿಕರ ತಿಂಡಿತಿನಿಸುಗಳು ಸವಿಯುವ ಮೂಲಕ ಹಬ್ಬವನ್ನು ವಿನೂತನವಾಗಿ ಆಚರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...