ಬೆಂಗಳೂರು: ಕುವೆಂಪು ವಿರಚಿತ ನಾಡಗೀತೆ ʼಜಯಭಾರತ ಜನನಿಯ ತನುಜಾತೆʼ ಗೆ ಧಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಮೂಲಕ ನಾಡಗೀತೆ ಕಾಲಮಿತಿ ಹಾಗೂ ಧಾಟಿಯ ಬಗ್ಗೆ ಹಲವು ವರ್ಷಗಳಿಂದ ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಹಿರಿಯ ಸಂಗೀತ ವಿದೂಷಿ ಹೆಚ್.ಆರ್. ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ನಾಡಗೀತೆಯನ್ನು ಹಾಡಲಾಗುತ್ತದೆ.
ನಾಡಗೀತೆ ಧಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ಪ್ರಸ್ತಾಪಕ್ಕೆ ಸಿಎಂ ಬೊಮ್ಮಾಯಿ ಸಮ್ಮತಿ ಸೂಚಿಸಿದ್ದು, ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, ಕುವೆಂಪು ವಿರಚಿತ ನಾಡಗೀತೆ ʼಜಯಭಾರತ ಜನನಿಯ ತನುಜಾತೆʼ ಗೆ ಧಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ. ಇನ್ಮುಂದೆ ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ ಎಂದು ತಿಳಿಸಿದ್ದಾರೆ.