ತರಕಾರಿ ಸೂಪ್ ಮಾಡಿಕೊಂಡು ಆಗಾಗ ಸವಿಯುತ್ತಿರುತ್ತೇವೆ. ಇಲ್ಲಿ ನಾನ್ ವೆಜ್ ಪ್ರಿಯರಿಗಾಗಿ ರುಚಿಕರವಾದ ನಾಟಿಕೋಳಿ ಸೂಪ್ ಇದೆ. ಮಾಡುವ ವಿಧಾನ ಕೂಡ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
¼ ಕೆಜಿ ನಾಟಿ ಕೋಳಿ, 1 ಟೀ ಸ್ಪೂನ್ – ಶುಂಠಿ ಬೆಳ್ಳುಳ್ಳಿ ಪೇಸ್ಟ್, ¼ ಕಪ್ – ಸಣ್ಣ ಈರುಳ್ಳಿ, 1 – ಸಣ್ಣ ಟೊಮೆಟೊ, 1/8 ಟೀ ಸ್ಪೂನ್ – ಅರಿಶಿನ, ½ ಟೀಸ್ಪೂನ್ – ಖಾರದ ಪುಡಿ, 2 ಕಪ್-ನೀರು, 1 ಟೇಬಲ್ ಸ್ಪೂನ್ – ಕೊತ್ತಂಬರಿಸೊಪ್ಪು, ಉಪ್ಪು – ರುಚಿಗೆ ತಕ್ಕಷ್ಟು.
ಒಗ್ಗರಣೆಗೆ: 1 ಟೇಬಲ್ ಸ್ಪೂನ್ – ಎಣ್ಣೆ, ½ ಇಂಚು – ಚಕ್ಕೆ, 1 – ಏಲಕ್ಕಿ, 1 – ಬೆಳ್ಳುಳ್ಳಿ, ಸ್ವಲ್ಪ – ಕರಿಬೇವು.
ಮಸಾಲೆಗೆ: ½ ಟೀ ಸ್ಪೂನ್ – ಧನಿಯಾ ಬೀಜ, ½ ಟೀ ಸ್ಪೂನ್ – ಜೀರಿಗೆ, ½ ಟೀ ಸ್ಪೂನ್ – ಕಾಳುಮೆಣಸು, 3 – ಸಣ್ಣ ಈರುಳ್ಳಿ, ಸ್ವಲ್ಪ – ನೀರು.
ಮಾಡುವ ವಿಧಾನ:
ಮೊದಲಿಗೆ ಮಸಾಲೆಗೆ ಬೇಕಿರುವ ಸಾಮಾಗ್ರಿಗಳನ್ನೆಲ್ಲಾ ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಚಕ್ಕೆ, ಏಲಕ್ಕಿ, ಲವಂಗ, ಬೆಳ್ಳುಳ್ಳಿ, ಕರಿಬೇವು ಹಾಕಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ನಂತರ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರಗೆ ಫ್ರೈ ಮಾಡಿ. ಇದಕ್ಕೆ ಸ್ವಚ್ಛಗೊಳಿಸಿದ ಚಿಕನ್ ಸೇರಿಸಿ ಅರಿಸಿನ ಪುಡಿ, ಖಾರದ ಪುಡಿ ಹಾಕಿ 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 6 ವಿಷಲ್ ಕೂಗಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.