ನಾಡಿನಾದ್ಯಂತ ಇಂದು ನಾಗರ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಗರಕಟ್ಟೆಗಳಿಗೆ ಹಾಲೆರೆಯಲಾಗುತ್ತದೆ.
ನಾಗರ ಪಂಚಮಿಯಂದು ಎಳ್ಳುಂಡೆ, ಕಡಬು ಮೊದಲಾದ ಖಾದ್ಯಗಳನ್ನು ತಯಾರಿಸಿ ಕುಟುಂಬ ಸದಸ್ಯರು ಸವಿಯುತ್ತಾರೆ. ಇದರ ಮಧ್ಯೆ ನಾಗರಪಂಚಮಿ ಹಬ್ಬದ ಮುನ್ನಾ ದಿನ ಹಾವೇರಿ ನಗರದಲ್ಲಿ ವಿಶೇಷ ಘಟನೆಯೊಂದು ನಡೆದಿದೆ.
ನಗರದ ಪುರ ಸಿದ್ದೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ಕುಂಡಲದಲ್ಲಿ ಸೋಮವಾರ ಬೆಳಿಗ್ಗೆ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದ್ದು, ಅರ್ಚಕರು ಇದಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದು, ದರ್ಶನಕ್ಕಾಗಿ ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿದ್ದಾರೆ.