ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಕಪ್ಪು ಚಿರತೆ ‘ಭಗೀರ’ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಈತ ಈಗ ಮತ್ತೆ ಕಂಡು ಬಂದಿರುವುದು ಸಫಾರಿ ಪ್ರಿಯರಿಗೆ ಸಂತಸ ಮೂಡಿಸಿದೆ.
ಇತ್ತೀಚೆಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ‘ಭಗೀರ’ ಕಣ್ಣಿಗೆ ಬಿದ್ದಿದ್ದು, ರಾಜಗಾಂಭೀರ್ಯದಲ್ಲಿ ನಡಿಗೆ ಹಾಕಿಕೊಂಡು ಹೋಗುತ್ತಿದ್ದ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.
ನಾಗರಹೊಳೆ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಕಪ್ಪು ಚಿರತೆ ‘ಭಗೀರ’ ವಾಸವಾಗಿದ್ದು, ರಕ್ತದಲ್ಲಿನ ಮಿಲೆನಿನ್ ಎಂಬ ಅಂಶದ ವ್ಯತ್ಯಾಸದಿಂದ ಪ್ರಾಣಿಗಳ ದೇಹದ ಬಣ್ಣದಲ್ಲಿ ವ್ಯತ್ಯಾಸವಾಗುವ ಕಾರಣ ಕಪ್ಪು ದೇಹ ಹೊಂದಿದೆ ಎನ್ನಲಾಗಿದೆ.