ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ರಾಜ್ಯದ ಜನತೆಗೆ ಸರ್ಕಾರ ಶುಭ ಸುದ್ದಿ ನೀಡಿತ್ತು. ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯನ್ನು ಈಗ ಮತ್ತೆ ಅನುಷ್ಠಾನಗೊಳಿಸಲಾಗಿದ್ದು ನವೆಂಬರ್ 1ರ ಇಂದಿನಿಂದ ಇದು ಕಾರ್ಯರೂಪಕ್ಕೆ ಬಂದಿದೆ.
ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ 500 ರೂಪಾಯಿ ಹಾಗೂ ನಗರ ಪ್ರದೇಶದ ಸಹಕಾರಿ ಗಳಿಗೆ 1000 ರೂಪಾಯಿ ವಂತಿಗೆ ನಿಗದಿಪಡಿಸಲಾಗಿದ್ದು, ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಹೆಚ್ಚುವರಿ ತಲಾ 200 ರೂಪಾಯಿ ವಂತಿಗೆ ಪಾವತಿಸಬೇಕಾಗುತ್ತದೆ.
ಒಟ್ಟು 1650 ಕಾಯಿಲೆಗಳಿಗೆ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿಯವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಮುನ್ನೂರು ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದೆ. ಆದರೆ ಒಂದು ಕುಟುಂಬದಲ್ಲಿ ನಾಲ್ಕು ಜನರು ಸೇರಿದಂತೆ ಒಟ್ಟು 5 ಲಕ್ಷ ರೂಪಾಯಿ ಮೀರದಂತೆ ಚಿಕಿತ್ಸೆ ಪಡೆದುಕೊಳ್ಳಬಹುದು ಎಂಬ ನಿರ್ಬಂಧ ವಿಧಿಸಲಾಗಿದೆ.
ಯಶಸ್ವಿನಿ ಕಾರ್ಡ್ ಪಡೆದ ಬಳಿಕ 15 ದಿನಗಳ ನಂತರ ಈ ಯೋಜನೆ ಸೌಲಭ್ಯ ಪಡೆಯಲು ಫಲಾನುಭವಿಗಳು ಅರ್ಹರಾಗಲಿದ್ದು, ಸರ್ಕಾರಿ ನೌಕರ ಅಥವಾ ಖಾಸಗಿ ಕಂಪನಿಯಲ್ಲಿ ವೇತನ ಪಡೆಯುತ್ತಿದ್ದರೆ, ಯಾವುದೇ ವಿಮಾ ಯೋಜನೆಯಲ್ಲಿದ್ದರೆ ಅವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.