ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಸೂಕ್ಷ್ಮ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗುರುವಾರದಂದು ಗುಜರಾತಿನಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಯುತ್ತಿದ್ದ ವೇಳೆ ಬಾಲಕಿಯೊಬ್ಬಳು ತಾನು ವೈದ್ಯೆಯಾಗಬೇಕೆಂಬ ಕನಸು ಬಿಚ್ಚಿಟ್ಟಿದ್ದು, ಇದನ್ನು ಕೇಳಿ ನರೇಂದ್ರ ಮೋದಿಯವರು ಭಾವುಕರಾಗಿದ್ದರು. ಬಳಿಕ ತಾವು ಬಾಲಕಿಗೆ ಈ ನಿಟ್ಟಿನಲ್ಲಿ ನೆರವಾಗುವುದಾಗಿ ಭರವಸೆ ನೀಡಿದ್ದರು.
ಇದೀಗ ನರೇಂದ್ರ ಮೋದಿಯವರ ಸಂವೇದನಾಶೀಲತೆಯ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಪ್ರಧಾನಿಯ ನಡೆ ಕುರಿತು ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೋದಿಯವರ ಕಚೇರಿಯಲ್ಲಿ ಸಭೆಯೊಂದು ನಡೆಯುತ್ತಿತ್ತಂತೆ. ಆಗ ನವಿಲೊಂದು ಕಿಟಕಿ ಬಳಿ ಹಾರಿಬಂದು ಗಾಜನ್ನು ಕೊಕ್ಕಿನಿಂದ ಬಡೆಯಲಾರಂಭಿಸಿದೆ. ಇದನ್ನು ಗಮನಿಸಿದ ನರೇಂದ್ರ ಮೋದಿಯವರು ಸಭೆಯನ್ನು ಮಧ್ಯದಲ್ಲೇ ನಿಲ್ಲಿಸಿ ತಮ್ಮ ಸಿಬ್ಬಂದಿಯನ್ನು ಕರೆದು ನವಿಲು ಹಸಿದಿರಬೇಕು ಅದಕ್ಕೆ ಆಹಾರ ನೀಡಿ ಎಂದು ಸೂಚಿಸಿದ್ದಾರೆ. ಈ ವಿಷಯವನ್ನು ವಿವರಿಸಿರುವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರದ್ದು ಸೂಕ್ಷ್ಮ ಮನಸ್ಸು ಹಾಗೂ ಸಂವೇದನಾಶೀಲರು ಎಂದು ಬಣ್ಣಿಸಿದ್ದಾರೆ.