ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಮ್ಮ ತಾಯಿ ಖಾತೆಗೆ ಕೇಂದ್ರ ಸರ್ಕಾರದಿಂದ 1 ಲಕ್ಷ ರೂಪಾಯಿ ಜಮಾ ಆಗಿದೆ. ಇದೇ ರೀತಿ ರೈತರ ಖಾತೆಗೆ 1, 2, 3 ಲಕ್ಷ ರೂಪಾಯಿ ಜಮೆಯಾಗುತ್ತದೆ. ಅದು ಕೂಡ ನೇರವಾಗಿ ಖಾತೆಗೆ ಬರುತ್ತದೆ. ಇಂಥದೊಂದು ಸಾಧನೆ ನರೇಂದ್ರ ಮೋದಿ ಸರ್ಕಾರದಿಂದ ಮಾತ್ರ ಎಂದು ಹೇಳಿದ್ದರು.
ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೆ ಕಾರಣವಾಗಿದ್ದರೆ ಇದೀಗ ಪ್ರತಿಪಕ್ಷ ಕಾಂಗ್ರೆಸ್, ಯಾವ ಯೋಜನೆಯಡಿ ನಳಿನ್ ಕುಮಾರ್ ಕಟೀಲ್ ಅವರ ತಾಯಿಯವರ ಖಾತೆಗೆ 1 ಲಕ್ಷ ರೂಪಾಯಿ ಜಮಾ ಆಗಿದೆ ಎಂಬುದನ್ನು ತಿಳಿಸಬೇಕು ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ. ಅಲ್ಲದೆ ಯಾವ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಬಂದಿದೆ ಎಂಬುದರ ಮಾಹಿತಿಯನ್ನೂ ಸಹ ಸಂಸದರು ನೀಡಬೇಕು ಎಂದು ಆಗ್ರಹಿಸಿದೆ.
ಕೆಪಿಸಿಸಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಭಾಷಣದ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದ್ದು, ಜೊತೆಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಟ್ವೀಟ್ ಅನ್ನು ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ರಾಜ್ಯ ಘಟಕದ ಟ್ವಿಟರ್ ಖಾತೆಗಳಿಗೂ ಸಹ ಟ್ಯಾಗ್ ಮಾಡಲಾಗಿದೆ.