ಯುದ್ಧ ಪೀಡಿತ ಉಕ್ರೇನ್ ನಲ್ಲೀಗ ಅಕ್ಷರಶಃ ಭಯದ ವಾತಾವರಣ ತಾಂಡವವಾಡ್ತಿದೆ. ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ, ಗಾಯಾಳುಗಳ ನೋವಿನ ಕದಲಿಕೆ, ಯಾವುದೇ ಕ್ಷಣದಲ್ಲಾದರೂ ಸಾವು ಬಂದೆರಗಬಹುದು ಅನ್ನೋ ಆತಂಕ ನಾಗರೀಕರನ್ನು ಕಂಗಾಲಾಗಿಸಿದೆ.
ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿರುವ ಮಧ್ಯಪ್ರದೇಶದ ಇಂದೋರ್ ಮೂಲದ ವಿದ್ಯಾರ್ಥಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಉಕ್ರೇನ್‌ನ ಝಪೊರಿಝಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಮಾಡುತ್ತಿರುವ 22 ವರ್ಷದ ಆಶಿಶ್ ಚಂದ್ರ ಹೆತ್ತವರಿಗೆ ವಿಡಿಯೋ ಕಾಲ್ ಮಾಡಿದ್ದ. ತನ್ನ ಮನೆಯಿಂದ ಕೇವಲ ಐದು ಕಿಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ ಅಂತಾ ಪೋಷಕರಿಗೆ ತಿಳಿಸಿದ್ದಾನೆ.
ಸದ್ಯ ಉಕ್ರೇನ್ ನಲ್ಲಿರೋ ಕಠಿಣ ಪರಿಸ್ಥಿತಿಯ ಬಗ್ಗೆ ಮಗನಿಂದ ತಿಳಿದ ಹೆತ್ತವರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಆಶೀಶ್ ಹೇಳುವ ಪ್ರಕಾರ ಉಕ್ರೇನ್ ನ ಪಡಿತರ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿದೆ. ಆತನ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಎಟಿಎಂಗಳು ಬತ್ತಿ ಹೋಗಿವೆ. ಅಂಗಡಿಯವರು ಕಾರ್ಡ್ ಪಾವತಿಯನ್ನು ಸ್ವೀಕರಿಸುತ್ತಿಲ್ಲ.
ಫೆಬ್ರವರಿ 26ರಂದು ಆಶೀಶ್ ಭಾರತಕ್ಕೆ ಮರಳಬೇಕಿತ್ತು. ಆದ್ರೆ ರಷ್ಯಾ ದಾಳಿಯಿಂದಾಗಿ ವಿಮಾನಗಳ ಹಾರಾಟವೇ ರದ್ದಾಗಿದೆ. ಹಾಗಾಗಿ ಮಗನನ್ನು ಸುರಕ್ಷಿತವಾಗಿ ಕರೆತರಲು ಸಹಾಯ ಮಾಡುವಂತೆ ಹೆತ್ತವರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉಕ್ರೇನ್ ನಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಪದವಿಗಾಗಿ ತೆರಳಿದ್ದಾರೆ. ಅವರನ್ನೆಲ್ಲ ಸೇಫಾಗಿ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.