ನಯಾಗರ ಫಾಲ್ಸ್ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ಈ ಜಲಪಾತದ ಸುಂದರ ಫೋಟೋ ಮತ್ತು ವಿಡಿಯೋಗಳನ್ನು ನೋಡಿದವರೆಲ್ಲ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡಬೇಕು ಅಂತಾ ಆಸೆ ಪಟ್ಟಿರ್ತಾರೆ. ಆದ್ರೆ ನಯಾಗರ ಜಲಪಾತ ನೋಡಲು ನೀವು ಸಾವಿರಾರು ಕಿಮೀ ದೂರದಲ್ಲಿರೋ ಅಮೆರಿಕಕ್ಕೆ ಹೋಗಬೇಕಾಗಿಲ್ಲ.
ಇಲ್ಲೇ ಹತ್ತಿರದ ಶಿವಮೊಗ್ಗದಲ್ಲಿ ನಯಾಗರ ಜಲಪಾತದಷ್ಟೇ ಅತ್ಯದ್ಭುತವಾದ ಸುಂದರ ಫಾಲ್ಸ್ ಹರಿಯುತ್ತಿದೆ. ಅದ್ಯಾವುದು ಅಂತಾ ಅಚ್ಚರಿಪಡಬೇಡಿ. ಇಷ್ಟು ರಮಣೀಯವಾಗಿ ನಯಾಗರವನ್ನೇ ಮೀರಿಸುವಂತೇ ಕಾಣ್ತಾ ಇರೋದು ನಮ್ಮ ನೆಚ್ಚಿನ ಜೋಗ ಜಲಪಾತ.
ರಘು ಎಂಬುವವರು ಚಿತ್ರೀಕರಿಸಿರುವ ವಿಡಿಯೋವನ್ನು ನಾರ್ವೆ ದೇಶದ ಎರಿಕ್ ಎಂಬಾತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 1.8 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ಕಾತರರಾಗಿರುವುದಾಗಿ ಕಮೆಂಟ್ ಕೂಡ ಮಾಡಿದ್ದಾರೆ.
ವಿಶೇಷವಾಗಿ ಮಳೆಗಾಲದಲ್ಲಿ ಜೋಗ ಜಲಪಾತವು ಧುಮ್ಮಿಕ್ಕುತ್ತದೆ. ಮಾನ್ಸೂನ್ ಸಮಯದಲ್ಲಿ ಜೋಗವನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬ. ಯಾಕಂದ್ರೆ ಈ ಭಾಗದಲ್ಲಿ ಸುರಿಯುವ ಮಳೆ ಈ ಪ್ರಕೃತಿಯ ವೈಭವಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಭವ್ಯವಾದ ಜೋಗ ಜಲಪಾತದ ನೋಟವು ತುಂಬಾ ಪ್ರಶಾಂತವಾಗಿದೆ. ಕೆಲವು ಕ್ಷಣ ಅಲ್ಲಿ ನಿಂತು ಜಲಪಾತವನ್ನು ನೋಡುತ್ತಿದ್ರೆ ಎಂಥವರು ಕೂಡ ಮೈಮರೆತುಹೋಗ್ತಾರೆ.