ನಮ್ಮ ದೇಹಕ್ಕೆ ಉಪ್ಪು ಅತ್ಯಗತ್ಯ. ಅಗತ್ಯವೆಂದರೆ ಬರೀ ರುಚಿಗೆ ಮಾತ್ರವಲ್ಲ, ಶರೀರ ಧರ್ಮವನ್ನು ನಿರ್ವಹಿಸಲು ಉಪ್ಪಿನ ಅಗತ್ಯವಿದೆ. ಶರೀರದಲ್ಲಿ ಉಪ್ಪು ಇಲ್ಲದಿದ್ದರೆ ಮನುಷ್ಯ ಇಲ್ಲವೇ ಇತರ ಜೀವಿಗಳು ಬದುಕಲು ಸಾಧ್ಯವೇ ಇಲ್ಲ. ಸಿಹಿ, ಖಾರ, ಹುಳಿ ಇಲ್ಲದೇ ಬದುಕಬಹುದು. ಆದರೆ ಉಪ್ಪು ಇಲ್ಲದೆ ಜೀವಿಸುವುದು ಕಷ್ಟ. ಆದರೆ ಉಪ್ಪು ಅತಿಯಾದರೂ ಕೂಡ ಅಪಾಯವಿದೆ.
ಮಾನವ ದೇಹದಲ್ಲಿ ಸುಮಾರು 50 ಲೀಟರ್ ನೀರು ಇರುತ್ತದೆ. ಮಾಂಸಖಂಡಗಳಲ್ಲಿ ಶೇಕಡಾ 75ರಷ್ಟು, ಜೀರ್ಣಾಂಗಗಳಲ್ಲಿ ಶೇಕಡಾ 70ರಷ್ಟು, ಮೆದುಳಿನಲ್ಲಿ ಶೇಕಡಾ 79ರಷ್ಟು, ಮೂತ್ರ ಪಿಂಡದಲ್ಲಿ ಶೇಕಡಾ 83 ರಷ್ಟು ನೀರು ಇರುತ್ತದೆ. ಶರೀರದಲ್ಲಿರುವ ಈ ನೀರೆಲ್ಲಾ ಸ್ವಚ್ಛವಾದ ನೀರಲ್ಲ. ಅದು ಉಪ್ಪು ನೀರು. ದೇಹದಲ್ಲಿರುವ ರಕ್ತವು ಕೂಡ ಉಪ್ಪಾಗಿರುತ್ತದೆ. ಲಾಲಾರಸ, ಜೊಲ್ಲು ಉಪ್ಪಾಗಿರುತ್ತದೆ. ಅಷ್ಟೇ ಯಾಕೆ ಕಣ್ಣೀರು ಕೂಡ ಉಪ್ಪಾಗಿರುತ್ತದೆ.
ಉಪ್ಪು ಶರೀರದಲ್ಲಿನ ನೀರಿನ ಸಮತೋಲನವನ್ನು ಕಾಪಾಡುತ್ತದೆ. ದೇಹದೊಳಗಿನ ರಾಸಾಯನಿಕ ಕ್ರಿಯೆಗಳು ಎಲ್ಲವೂ ಉಪ್ಪನ್ನು ಆಧರಿಸಿವೆ. ಹೃದಯ, ಮೂತ್ರಪಿಂಡಗಳು, ಮಾಂಸಪೇಶಿಗಳು, ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡಬೇಕೆಂದರೆ ದೇಹಕ್ಕೆ ಉಪ್ಪು ಅತ್ಯಗತ್ಯ.