ನೆರೆ ರಾಷ್ಟ್ರ ಪಾಕಿಸ್ತಾನ ಇನ್ನಿಲ್ಲದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪೆಟ್ರೋಲ್ – ಡೀಸೆಲ್ ಬೆಲೆ 250 ರೂಪಾಯಿ ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದ್ದು, ಬಡ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.
ಆಹಾರ ಪೂರೈಕೆ ವಾಹನಗಳು ಬಂದ ವೇಳೆ ಅಲ್ಲಿನ ಜನ ತಮ್ಮ ಹಸಿವು ನೀಗಿಸಿಕೊಳ್ಳಲು ಅವುಗಳ ಮೇಲೆ ಮುಗಿ ಬೀಳುತ್ತಿದ್ದಾರೆ. ಇಂತಹ ಅನೇಕ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಪಾಕಿಸ್ತಾನ ಈ ಸ್ಥಿತಿ ತಲುಪಲು ಸ್ವಯಂಕೃತ ಅಪರಾಧವೇ ಕಾರಣವಾಗಿದ್ದು, ಉಗ್ರರನ್ನು ಪೋಷಿಸಿದ್ದು ಇವುಗಳಲ್ಲಿ ಪ್ರಮುಖ ಅಂಶ. ಇಷ್ಟಾದರೂ ಸಹ ಪಾಕಿಸ್ತಾನ ಬುದ್ಧಿ ಕಲಿಯುತ್ತಿಲ್ಲ.
ಇದರ ಮಧ್ಯೆ ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಈಗ ಪಾಕಿಸ್ತಾನ ದಿವಾಳಿ ಆಗಿರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ಸದ್ಯಕ್ಕೆ ದೇಶ ಸುಧಾರಿಸಿಕೊಳ್ಳುವುದು ಕಷ್ಟ ಎಂಬುದನ್ನು ಹೇಳಿರುವ ಅವರು, ಅಂತಹ ದಿನಗಳು ಬಹಳ ದೂರವಿದೆ. ನಾವು ಈಗ ದಿವಾಳಿಯಾಗಿರುವ ದೇಶದಲ್ಲಿ ಬದುಕುತ್ತಿದ್ದೇವೆ ಎಂದಿದ್ದಾರೆ.