ಮೇ 10 ರಂದು ವಿಧಾನಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆಯೇ ರಿಲ್ಯಾಕ್ಸ್ ಮೂಡಿನಲ್ಲಿ ಸಿಂಗಾಪುರಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಇಂದು ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಾಸ್ ಬಂದಿದ್ದಾರೆ.
ಈ ಸಂದರ್ಭದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಸರ್ಕಾರ ರಚಿಸಲು ಮುಂದಾಗುವ ಪಕ್ಷವನ್ನು ಬೆಂಬಲಿಸುವ ಸಲುವಾಗಿ ಜಾತ್ಯಾತೀತ ಜನತಾದಳ ಷರತ್ತು ವಿಧಿಸಲು ಮುಂದಾಗಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಬಲ ಕೋರಿ ಯಾವ ಪಕ್ಷಗಳ ನಾಯಕರೂ ಸಹ ನನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿರುವ ಎಚ್.ಡಿ. ಕುಮಾರಸ್ವಾಮಿ, ನಾನ್ಯಾವ ಷರತ್ತನ್ನೂ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವ ವಿಶ್ವಾಸವನ್ನು ಕುಮಾರಸ್ವಾಮಿಯವರು ಹೊಂದಿದ್ದಾರೆ.