ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೆ ಪೊಲೀಸರು ಎರಡು ಬಾರಿ ನೋಟೀಸ್ ನೀಡಿದ್ದರು. ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ ಹಂಸಲೇಖಾ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಪತ್ರ ಬರೆದಿರುವ ಹಂಸಲೇಖಾ, ಕನ್ನಡಿಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.
ನಾನು ಆರೋಗ್ಯದಿಂದ ಇದ್ದೇನೆ. ನಾನು ಅನಾರೋಗ್ಯಕ್ಕೀಡಾಗಿದ್ದೇನೆ ಎಂದು ಹಲವು ಕರೆಗಳು ಬರುತ್ತಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತು, ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು…. ಈ ಪ್ರೀತಿಗಾಗಿ ನಾನು ತುಂಬಾ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖವನ್ನು ಈಗ ನಾನು ಅನುಭವಿಸುತ್ತಿದ್ದೇನೆ.
ಪ್ರಾಣ ಉಳಿಯಲು ಕಾರಣವಾಯ್ತು ಶಾಲೆ ತಪ್ಪಿಸಿಕೊಳ್ಳಲು ಬಾಲಕಿ ಹೇಳಿದ ಸುಳ್ಳು…!
ನಾನು ಕೇಳದೆಯೇ ಸರ್ಕಾರ ನನ್ನ ಮನೆಗೆ ಭದ್ರತೆ ಕೊಟ್ಟಿದೆ. ನಾನು ಕೇಳದೆಯೇ ಕರ್ನಾಟಕದ ಲಕ್ಷಾಂತರ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರುತ್ತಿದ್ದಾರೆ. ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದೆ. ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಕ್ಕೆ ಕಾರಣವಾಗಬಹುದು. ಅಭಿಮಾನ ಹಾಡಿನಂತಿರಬೇಕು. ಹಾಡು ಕೇಳಿಸುತ್ತದೆ… ಮುಟ್ತಿಸುತ್ತದೆ… ನಿಮ್ಮ ಪ್ರೀತಿ ನನಗೆ ತಲುಪಿದೆ. ಹೃದಯ ತುಂಬಿ ನಮಸ್ಕಾರಗಳು ಎಂದು ತಿಳಿಸಿದ್ದಾರೆ.