ರಾಮನಗರ : ಮತ್ತೊಮ್ಮೆ ನನ್ನನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ನಾನು ಎಂದಿಗೂ ಯಾವುದಕ್ಕೂ ಹೆದರಿಲ್ಲ. ಮುಂದೆಯೂ ಹೆದರುವುದಿಲ್ಲ. ನನ್ನೊಂದಿಗೆ ನನ್ನ ಜನ ಇದ್ದಾರೆ. ಅವರ ಪ್ರೀತಿ-ಆದರಕ್ಕೆ ನನ್ನ ಕೃತಜ್ಞತೆಗಳು. ತಿಹಾರ ಜೈಲಿಗೆ ಹೋಗಿದ್ದಕ್ಕೆ ಈ ಗಡ್ಡ ಬಿಟ್ಟಿದ್ದೇನೆ. ಇದಕ್ಕೆ ನಮ್ಮ ಜನರೇ ಮುಕ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಮತ್ತೊಮ್ಮೆ ನನ್ನನ್ನು ಜೈಲಿಗೆ ಅಟ್ಟಲು ಪ್ರಯತ್ನಿಸಲಾಗುತ್ತಿದೆ. ಎಷ್ಟೇ ಆದರೂ ಜನವಿರೋಧಿ ಪಕ್ಷದ ವಿರುದ್ಧ ನಮ್ಮ ಹೋರಾಟ ನಡೆದೇ ತೀರುತ್ತದೆ ಎಂದು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಅವರಿಗೆ ನಮ್ಮೆಲ್ಲರ ಲಿಸ್ಟ್ ಕಳುಹಿಸುತ್ತೇನೆ. ಅವರು ಎಲ್ಲರನ್ನೂ ಬೇಕಾದರೆ ಜೈಲಿಗೆ ಕಳುಹಿಸಲಿ. ನಮ್ಮ ಹೋರಾಟಕ್ಕೆ ಎಲ್ಲರೂ ವಿರೋಧ ಮಾಡುತ್ತಿದ್ದಾರೆ. ನಾಡ ದ್ರೋಹಿ ಬಿಜೆಪಿ ಎಂಬುವುದು ಈಗಾಗಲೇ ಜನರಿಗೆ ತಿಳಿದಿದೆ ಎಂದು ಗುಡುಗಿದ್ದಾರೆ.
ನೀರಿಗೋಸ್ಕರ ಹೋರಾಟ ಮಾಡುತ್ತಿದ್ದೇನೆ. ಎಲ್ಲ ತಾಯಂದಿರ ಪಾದ ಮುಟ್ಟಿ ಈ ಹೋರಾಟ ಕೈಗೊಂಡಿದ್ದೇನೆ. ನನ್ನನ್ನು ದೊಡ್ಡಆಲಹಳ್ಳಿಯ ಕನಕಪುರದವನು ಎಂದೇ ಜನರು ಗುರುತಿಸುತ್ತಾರೆ. ಅವರೆಲ್ಲರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಹೇಳಿದ್ದಾರೆ.