ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಹೀಗಾಗಿ ಪ್ರಮೋದ್ ಮುತಾಲಿಕ್ ಈಗಿನಿಂದಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತೀಚೆಗಷ್ಟೇ ಮಾತನಾಡಿದ್ದ ಅವರು, ಈ ಚುನಾವಣೆಯಲ್ಲಿ ನನಗೆ ಬಿಜೆಪಿಯವರೇ ಸಹಾಯ ಮಾಡುತ್ತಿದ್ದಾರೆ. ಬೆಂಬಲದ ಜೊತೆಗೆ ಧನ ಬಲವನ್ನು ಒದಗಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದು, ಇದಕ್ಕೆ ಸಚಿವ ಸುನಿಲ್ ಕುಮಾರ್ ಟಾಂಗ್ ನೀಡಿದ್ದರು.
ಪ್ರಮೋದ್ ಮುತಾಲಿಕ್ ಯಾವ ಕಾರಣಕ್ಕೆ ಕಾರ್ಕಳದಿಂದ ಸ್ಪರ್ಧಿಸುತ್ತಿದ್ದಾರೆ ಎಂಬುದರ ಕುರಿತು ಅನುಮಾನವಿತ್ತು. ಇದೀಗ ಅವರ ಹೇಳಿಕೆಯಿಂದ ಅದು ನಿಜವಾಗಿದೆ ಎಂದಿದ್ದ ಸುನಿಲ್ ಕುಮಾರ್, ಕಾರ್ಕಳದ ಹಿತ ಅಥವಾ ಹಿಂದುತ್ವದ ಹಿತ ಮುತಾಲಿಕ್ ಸ್ಪರ್ಧೆಯ ಹಿಂದಿಲ್ಲ ಎಂದು ಟೀಕಿಸಿದ್ದರು.
ಇದೀಗ ಕಾರ್ಕಳದಲ್ಲಿ ಮಾತನಾಡಿರುವ ಪ್ರಮೋದ್ ಮುತಾಲಿಕ್, ನನ್ನತ್ರ ಹಣ ಇಲ್ಲ ಹಾಗಾಗಿ ಜನರ ಹತ್ತಿರ ಕೇಳುತ್ತಿದ್ದೇನೆ. ತಮ್ಮ ಪರ ಪ್ರಚಾರ ಮಾಡುವ ಕಾರ್ಯಕರ್ತರ ಊಟ ತಿಂಡಿಗಾಗಿ ಹಣ ಕೇಳುತ್ತಿದ್ದೇನೆ ಎಂದಿದ್ದಾರೆ.
ಅಲ್ಲದೆ ಸುನಿಲ್ ಕುಮಾರ್ ಅವರಿಗೆ ತಿರುಗೇಟು ನೀಡಿರುವ ಪ್ರಮೋದ್ ಮುತಾಲಿಕ್, ನಾನು ಹಣ ಮಾಡುವವನಲ್ಲ. ಹಾಗೆ ಮಾಡಬೇಕೆಂದಿದ್ದರೆ 45 ವರ್ಷಗಳ ಕಾಲ ಬೇಕಿರಲಿಲ್ಲ. ಅಸಲಿ ಹಿಂದುತ್ವ ಏನೆಂಬುದನ್ನು ತೋರಿಸಲು ಬೆಳಗಾವಿಯಿಂದ ಕಾರ್ಕಳಕ್ಕೆ ಬಂದಿದ್ದೇನೆ. ನಾನು ಬೇರೆಯವರಂತೆ ಬೇನಾಮಿ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಹೊಂದಿಲ್ಲ ಎಂದು ಹೇಳಿದ್ದಾರೆ.