70 ವರ್ಷ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿದ್ದು, ಆದರೆ ಇದು ಈ ಬಾರಿ ರಾಜ್ಯದ ಹಲವು ನಾಯಕರಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರುಗಳೇ ಬಿಜೆಪಿ ಟಿಕೆಟ್ ನಿಂದ ವಂಚಿತರಾಗಿದ್ದಾರೆ. ಹೀಗಾಗಿ ತಮ್ಮ ಪುತ್ರರಿಗೆ ಅವಕಾಶ ಮಾಡಿಕೊಡಲು ಮುಂದಾಗಿದ್ದು, ಈಗ ಎಂಟಿಬಿ ನಾಗರಾಜ್ ಕೂಡ ಇದೇ ಮಾತುಗಳನ್ನು ಆಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಘೋಷಿಸಿದ್ದು, ಆದರೆ ಪಕ್ಷದ ಒಂದು ವಲಯದಿಂದ ಆಪಸ್ವರ ಕೇಳಿ ಬಂದ ಬಳಿಕ ಬಿಜೆಪಿ ಹೈಕಮಾಂಡ್ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದರು.
ಇದೀಗ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಚಿವ ಎಂಟಿಬಿ ನಾಗರಾಜ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡದಿದ್ದರೆ ನನ್ನ ಮಗ ನಿತಿನ್ ಪುರುಷೋತ್ತಮ್ ಗೆ ಟಿಕೆಟ್ ಕೊಡಿಸುತ್ತೇನೆ. ನಾನು ಹೇಗಿದ್ದರೂ ವಿಧಾನ ಪರಿಷತ್ ಸದಸ್ಯನಾಗಿದ್ದು, ಇನ್ನೂ ಮೂರು ವರ್ಷಗಳ ನನ್ನ ಅಧಿಕಾರವಧಿ ಇದೆ ಎಂದು ಹೇಳಿದ್ದಾರೆ. ಆದರೆ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಉನ್ನತ ನಾಯಕರು ಎಷ್ಟರಮಟ್ಟಿಗೆ ಅನುವು ಮಾಡಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.