
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಜೆಸಿಬಿಯಲ್ಲಿ ಚೆನಾಬ್ ನದಿ ದಾಟುವಾಗ ಸುನೀಲ್ ಮತ್ತು ಬಬ್ಲು ನದಿಯ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ನದಿಯಲ್ಲಿ ನೀರಿನ ಮಟ್ಟವು ಸ್ಥಿರವಾಗಿ ಹೆಚ್ಚುತ್ತಿರುವ ಕಾರಣ, ಇಬ್ಬರು ಯುವಕರನ್ನು ರಕ್ಷಿಸುವವರೆಗೆ ವಾಹನದ ಛಾವಣಿಯ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಲಾಯಿತು.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸೇನೆಯ 17 ರಾಷ್ಟ್ರೀಯ ರೈಫಲ್ಸ್‌ನ ಸೈನಿಕರು ಪೊಲೀಸರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹಗ್ಗದ ಸಹಾಯದಿಂದ ಇಬ್ಬರು ಯುವಕರನ್ನು ಸೈನಿಕರು ರಕ್ಷಿಸಿದ್ದಾರೆ.
ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನ ಸೊಹಾಲ್ ಬಳಿಯ ಚೆನಾಬ್ ನದಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಭಾರತೀಯ ಸೇನೆ ರಕ್ಷಿಸಿದೆ. ನೀರಿನ ಮಟ್ಟವು ವೇಗವಾಗಿ ಏರುತ್ತಿತ್ತು. ಸೈನಿಕರು ನದಿಗೆ ಅಡ್ಡಲಾಗಿ ರಾಪ್ಪೆಲ್ ಮಾಡಿ, ಯುವಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.
ನದಿಯ ನೀರಿನ ಮಟ್ಟ ಹೆಚ್ಚುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು. ಅಂತಿಮವಾಗಿ ಇಬ್ಬರು ಸೇನಾ ಸಿಬ್ಬಂದಿ ಸೇತುವೆಯ ಜೋಡಣೆಗಾಗಿ ಕಟ್ಟಲಾದ ಹಗ್ಗವನ್ನು ಬಳಸಿಕೊಂಡು ನದಿಯನ್ನು ದಾಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರತೀಯ ಸೇನೆಯ ಅಧಿಕಾರಿಗಳ ವೀರಾವೇಶವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.