ಮಸೂರಿಯ ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ವಿದ್ಯಾರ್ಥಿಗಳ ನಡುವೆ ಭಾರೀ ಜಟಾಪಟಿ ನಡೆದಿದೆ. ಈ ಸಂಬಂಧ ಗಾಜಿಯಾಬಾದ್ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಕಾಲೇಜಿನಲ್ಲಿ ಪ್ರಾಬಲ್ಯ ಮತ್ತು ಪ್ರಭಾವದ ವಿಚಾರಕ್ಕೆ ಘರ್ಷಣೆ ನಡೆದಿದೆ ಅಂತಾ ಹೇಳಲಾಗ್ತಿದೆ. ಸುಮಾರು ಎರಡು ಡಜನ್ ವಿದ್ಯಾರ್ಥಿಗಳು ಎರಡು ಗುಂಪುಗಳಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಂಜೆ 4.30ರ ಸುಮಾರಿಗೆ ನಡು ರಸ್ತೆಯಲ್ಲೇ ಕಿತ್ತಾಟ ಶುರು ಮಾಡಿದ್ದಾರೆ.
ಘರ್ಷಣೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಪ್ರಥಮ ಮತ್ತು ಎರಡನೇ ವರ್ಷದ ಬಿಟೆಕ್ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳ ಜಗಳ ನಡೆಯುತ್ತಿರುವ ಸಂದರ್ಭದಲ್ಲೇ ಹೋಂಡಾ ಸಿಟಿ ಕಾರೊಂದು ವೇಗವಾಗಿ ನುಗ್ಗಿ ಬಂದಿದೆ. ಕಾರು ನೋಡಿ ಹಲವಾರು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ. ಕಾರು ವಿದ್ಯಾರ್ಥಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ, ಆತ ಹಲವು ಅಡಿಗಳಷ್ಟು ಎತ್ತರಕ್ಕೆ ಎಗರಿ ಬಿದ್ದಿದ್ದಾನೆ. ಘರ್ಷಣೆಯಲ್ಲಿ ಭಾಗಿಯಾಗಿದ್ದ 6 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾಲೇಜಿನ ಅಧಿಕಾರಿಗಳಿಗೂ ಘರ್ಷಣೆ ಬಗ್ಗೆ ಮಾಹಿತಿ ನೀಡಲಾಗಿದೆ. ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಕಾರನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದಾರೆ.