ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ ಚಿತ್ರರಂಗಕ್ಕೆ ಅವರು ನೀಡಿದ ಸೇವೆಯನ್ನು ಸ್ಮರಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗಿತ್ತು.
ಇದೀಗ ಅವರ ಮುಡಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಡಾ. ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಗೆ ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 10 ರ ಕಾರಂತರ ಜನ್ಮ ದಿನದಂದು ಈ ಪ್ರಶಸ್ತಿಯನ್ನು ರಮೇಶ್ ಅರವಿಂದ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಈಗಾಗಲೇ ಈ ಪ್ರಶಸ್ತಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಎಂ. ವೀರಪ್ಪ ಮೊಯ್ಲಿ, ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯ, ಕಲಾವಿದೆ ಜಯಶ್ರೀ, ಸಾಲುಮರದ ತಿಮ್ಮಕ್ಕ, ಡಾ. ಮೋಹನ್ ಆಳ್ವ, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕವಿ ಜಯಂತ ಕಾಯ್ಕಿಣಿ, ಡಾ. ಎಸ್.ಎಲ್. ಭೈರಪ್ಪ, ಪತ್ರಕರ್ತ ರವಿ ಬೆಳಗೆರೆ ಅವರಿಗೆ ಪ್ರದಾನ ಮಾಡಲಾಗಿದೆ.