ಖ್ಯಾತ ನಟ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ವರ್ಷ ಸಮೀಪಿಸುತ್ತಿದೆ. ಆದರೆ ಕರ್ನಾಟಕ ಜನತೆಯ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ ನಗರಗಳಲ್ಲಿ ಇಂದಿಗೂ ಕೂಡ ಪುನೀತ್ ರಾಜಕುಮಾರ್ ಅವರ ಕಟೌಟ್, ಪೋಸ್ಟರ್ ಗಳು ರಾರಾಜಿಸುತ್ತಿವೆ.
ಅಲ್ಲದೆ ಬಹಳಷ್ಟು ಬಡಾವಣೆಗಳಿಗೂ ಸಹ ಪುನೀತ್ ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಜೊತೆಗೆ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಅವರ ಅಭಿಮಾನಿಗಳಂತೂ ಪ್ರತಿನಿತ್ಯವೂ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಇದರ ಮಧ್ಯೆ ಶಿವಮೊಗ್ಗದ ವಿದ್ಯಾನಗರ ಬಡಾವಣೆಯ ಯಾಲಕಪ್ಪನಕೇರಿ ಶ್ರೀ ವೀರಕೇಸರಿ ಯುವಕರ ಸಂಘ, ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಆಚರಿಸಿದ್ದು, ಈ ವೇಳೆ 3000 ಜನರಿಗೆ ಬಾಡೂಟ ಬಡಿಸಲಾಗಿದೆ.
ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸ್ಮರಣೆ ಮಾಡಲಾಗಿದ್ದು ಬಳಿಕ ಮೂರು ಸಾವಿರ ಜನರಿಗೆ ನಾಲ್ಕು ಕುರಿ, 2 ಕ್ವಿಂಟಲ್ ಚಿಕನ್ ಹಾಗೂ ಮೊಟ್ಟೆ ಬಳಸಿ ಬಾಡೂಟ ಬಡಿಸಲಾಗಿದೆ.