ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿ ಪೋಸ್ಟ್ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಜೊತೆಗೆ ಸ್ಟಂಟ್‌ಗೆ ಬಳಸಿದ್ದ ಎರಡು ಎಸ್‌ಯುವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ಸೊರಖ ಗ್ರಾಮದ ನಿವಾಸಿ ರಾಜೀವ್ (21) ಎಂದು ಗುರುತಿಸಲಾಗಿದೆ.
ಬಾಲಿವುಡ್ ನಟ ಅಜಯ್ ದೇವಗನ್ ಅವರ ಚೊಚ್ಚಲ ಚಿತ್ರ ‘ಫೂಲ್ ಔರ್ ಕಾಂಟೆ’ ಮೂಲಕ ಎರಡು ಚಲಿಸುವ ಮೋಟಾರ್‌ಸೈಕಲ್‌ಗಳಲ್ಲಿ ನಿಂತು ದೇವಗನ್ ಮಾಡಿದ್ದ ಸಾಹಸವನ್ನು ನೀವು ನೋಡಿರಬಹುದು. ನಂತರ ಗೋಲ್ಮಾಲ್-3ನಲ್ಲಿ ಎರಡು ಕಾರುಗಳನ್ನು ಬಳಸಿ ಮತ್ತೆ ಅಜಯ್ ದೇವಗನ್ ಸಾಹಸ ಪ್ರದರ್ಶಿಸಿದ್ದರು. ಇದನ್ನೇ ಯುವಕನೊಬ್ಬ ಅನುಕರಣೆ ಮಾಡಲು ಹೋಗಿ ಜೈಲುಕಂಬಿ ಎಣಿಸುವಂತಾಗಿದೆ.
ನೋಯ್ಡಾ ರಸ್ತೆಯಲ್ಲಿ ಯುವಕನೊಬ್ಬ ಎರಡು ಚಲಿಸುವ ಎಸ್‌ಯುವಿಗಳಲ್ಲಿ ಬ್ಯಾಲೆನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದಲ್ಲದೆ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ ಯುವಕನ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ಎರಡು ವರ್ಷಗಳ ಹಿಂದೆ, ಮಧ್ಯಪ್ರದೇಶದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಸಮವಸ್ತ್ರದಲ್ಲಿ ಎರಡು ಹೋಂಡಾ ಸಿಟಿ ಕಾರುಗಳ ಮೇಲೆ ಇದೇ ರೀತಿಯ ಸಾಹಸವನ್ನು ಪ್ರದರ್ಶಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ, ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಜೊತೆಗೆ ದಂಡವನ್ನೂ ಸಹ ವಿಧಿಸಲಾಗಿತ್ತು.