ಬಾಲಿವುಡ್ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಅವರ ಕಾರು ಇಟಲಿಯ ಸಾರ್ಡಿನಿಯಾದಲ್ಲಿ ಅಪಘಾತಕ್ಕೀಡಾಗಿದೆ. ಇಬ್ಬರೂ ತಮ್ಮ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಸೂಪರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಫೆರಾರಿ ಪೋರ್ಟೊಫಿನೊ ಕನ್ವರ್ಟಿಬಲ್ ಹಿಂದಿನಿಂದ ಬಂದು ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಇದಾದ ನಂತರ ಅವರ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಈ ಅವಗಢದಲ್ಲಿ ಗಾಯತ್ರಿ ಜೋಶಿ ಮತ್ತು ವಿಕಾಸ್ ಒಬೆರಾಯ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಫೆರಾರಿಯಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ ಗಾಯತ್ರಿ ಮತ್ತವರ ಪತಿಯನ್ನು ಪಾರು ಮಾಡಿರೋದು ಅವರ ಸೂಪರ್ ಕಾರು.
ನವದೆಹಲಿಯಲ್ಲಿ ಈ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಕಾರಿನ ಬೆಲೆ 4 ಕೋಟಿ ರೂಪಾಯಿ ಇದೆ. ಇದು 5204 cc V10 40 ವಾಲ್ವ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 7-ಸ್ಪೀಡ್ ಲ್ಯಾಂಬೋರ್ಗಿನಿ ಡೊಪ್ಪಿಯಾ ಫ್ರಿಜಿಯೋನ್ (LDF) ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿಸಲ್ಪಟ್ಟಿದೆ.
ಈ ಕಾರಿನ ಗರಿಷ್ಠ ವೇಗ ಗಂಟೆಗೆ 325 ಕಿಮೀ. ಇದು ಕೇವಲ 3.1 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗ ಪಡೆಯಬಲ್ಲದು. ಇದರ ಮುಂಭಾಗದಲ್ಲಿ 20 ಇಂಚಿನ ಚಕ್ರಗಳು ಮತ್ತು ಹಿಂಭಾಗದಲ್ಲಿ 19 ಇಂಚಿನ ಚಕ್ರಗಳಿವೆ.
ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಕಾರಿನಲ್ಲಿ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟ್ ಮಾಡಬಹುದಾದ ಬಾಹ್ಯ ಹಿಂಬದಿಯ ಕನ್ನಡಿಗಳು, ಟಚ್ ಸ್ಕ್ರೀನ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಎಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ಚಕ್ರಗಳು, ಫಾಗ್ ಲೈಟ್ಸ್, ಪವರ್ ವಿಂಡೋಸ್ ಇವೆ. ಸೇಫ್ಟಿ ಫೀಚರ್ಸ್ ಅದ್ಭುತವಾಗಿದ್ದಿದ್ದರಿಂದಲೇ ಭೀಕರ ಅಪಘಾತದ ಬಳಿಕವೂ ನಟಿ ಗಾಯತ್ರಿ ಜೋಶಿ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.