ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಪೋಗಟ್ ಕೊಲೆ ರಹಸ್ಯ ಕೊನೆಗೂ ಬಯಲಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚುವ ಸಲುವಾಗಿ ಆಕೆಯ ಆಪ್ತ ಸಹಾಯಕನೇ ಹತ್ಯೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಗೋವಾದಲ್ಲಿ ಅನುಮಾನಾಸ್ಪದವಾಗಿ ನಟಿ ಸಾವನ್ನಪ್ಪಿದ ಬಳಿಕ ಆಕೆ ಸಹೋದರ ಇದು ಕೊಲೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಗೋವಾ ಪೊಲೀಸರು, ನಟಿ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ವಿಚಾರಣೆ ನಡೆಸಿದ ವೇಳೆ ಆಸ್ತಿಯ ಸಲುವಾಗಿ ಪಾನೀಯದಲ್ಲಿ ಮಾದಕ ವಸ್ತುವನ್ನು ಮಿತಿಮೀರಿದ ಪ್ರಮಾಣದಲ್ಲಿ ಸೇರಿಸಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸೋನಾಲಿ ಪೋಗಟ್ ತಮ್ಮ ಆಪ್ತ ಸಹಾಯಕ ಸುಧೀರ್ ಮೂಲಕ ಹಲವರಿಗೆ ಹಣ ನೀಡಿದ್ದರು ಎಂದು ಹೇಳಲಾಗಿದ್ದು, ಇವುಗಳ ವಿವರವನ್ನು ಡೈರಿ ಒಂದರಲ್ಲಿ ದಾಖಲಿಸಲಾಗಿತ್ತು. ಜೊತೆಗೆ ಉದ್ಯಮಿ ಹಾಗೂ ರಾಜಕಾರಣಿಗಳ ಜೊತೆಯೂ ಸಂಪರ್ಕ ಹೊಂದಿದ್ದ ಸೋನಾಲಿ ಕೆಲವೊಂದು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು ಎಂದು ಹೇಳಲಾಗಿದೆ. ಇದೆಲ್ಲದರ ಮಾಹಿತಿ ಹೊಂದಿದ್ದ ಸುಧೀರ್ ಆಸ್ತಿ ದೋಚುವ ಸಲುವಾಗಿ ಹತ್ಯೆ ಮಾಡಿದ್ದಾನೆ ಎಂಬುದು ಈಗ ಬಹಿರಂಗವಾಗಿದೆ.