ನಕಲಿ ಸ್ಟೂಡೆಂಟ್ ವೀಸಾ ಪಡೆದು ಲಂಡನ್ ಗೆ ತೆರಳಲು ಪ್ಲಾನ್ ಹಾಕಿದ್ದ ಕೇರಳ ಮೂಲದ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳದ ವೈನಾಡು ಮೂಲದ ಸೋಜು ತಜತುವೀಟಿಲ್ ಶಾಜಿ ಎಂಬ ಸೇಲ್ಸ್ ಮ್ಯಾನ್ ನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಲಂಡನ್ ನಲ್ಲಿ ಕೋಟ್ಯಾಂತರ ರೂಪಾಯಿ ಗಳಿಸುವ ಕನಸು ಹೊತ್ತಿದ್ದ ಶಾಜಿ, ಅದಕ್ಕೆ ಹುಡುಕಿಕೊಂಡಿದ್ದು ವಾಮಮಾರ್ಗ. ನಕಲಿ ಅಂಕಪಟ್ಟಿ ನೀಡಿ ಸ್ಟೂಡೆಂಟ್ ವೀಸಾ ಪಡೆದಿದ್ದ ಶಾಜಿಯ ದಾಖಲೆ ನೋಡಿ ಇಮಿಗ್ರೇಷನ್ ಆಫೀಸರ್ ಗೆ ಅನುಮಾನ ಮೂಡಿದೆ. ಎರಡೆರಡು ಬಾರಿ ದಾಖಲೆ ಪರಿಶೀಲನೆ ಮಾಡಿದ ಅಧಿಕಾರಿಗಳು, ಆತನ ವಿಚಾರಣೆಗೆ ಮುಂದಾಗಿದ್ದಾರೆ.
ಈ ವೇಳೆ ಬಿಬಿಎ ವ್ಯಾಸಂಗ ಮಾಡಿದ್ದು ಎಲ್ಲಿ..? ಪಾಸ್ ಆಗಿದ್ದು ಯಾವಾಗ ಎಂದು ಪ್ರಶ್ನಿಸಿದಾಗ, ಇಮಿಗ್ರೇಷನ್ ಸಿಬ್ಬಂದಿಯ ಪ್ರಶ್ನೆಗೆ ಶಾಜಿ ಕಕ್ಕಾಬಿಕ್ಕಿಯಾಗಿದ್ದಾನೆ. ಆನಂತರ ತಡ ಮಾಡದೆ ಆತನನ್ನ ಬಂಧಿಸಿದ ಏರ್ಪೋರ್ಟ್ ಪೊಲೀಸರು, ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಟ್ರೂ ವೇ ಗ್ಲೋಬಲ್ ಎಜುಕೇಷನ್ (True way global education) ಎನ್ನುವ ಸಂಸ್ಥೆ ಶಾಜಿಗೆ ಸ್ಟೂಡೆಂಟ್ ವೀಸಾ ನೀಡಿರುವುದು ಬಯಲಾಗಿದೆ. ಈ ಸಂಸ್ಥೆ ಮೇಲೆ, ಐಪಿಸಿ 465 ಸ(ಫೋರ್ಜರಿ) ಮತ್ತು 471 (ಅಸಲಿಯಂತೆ ನಕಲಿ ದಾಖಲೆ ಸೃಷ್ಟಿ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಶಾಜಿಯಿಂದ ಮಾಹಿತಿ ಪಡೆದ ಪೊಲೀಸರು ನಕಲಿ ಅಂಕಪಟ್ಟಿ ನೀಡಿದ್ದ ಅನುರಾಗ್ ಎನ್ನುವವನ್ನು ಬಂಧಿಸಿದ್ದಾರೆ.