ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ನೂರು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಕೆಲವೊಂದು ವಿಷಯಗಳ ಪರೀಕ್ಷೆಗೆ 125 ಅಥವಾ 150 ಅಂಕ ನಿಗದಿಪಡಿಸಿರಬಹುದು. ಆದರೆ ನೂರು ಅಂಕ ನಿಗದಿಪಡಿಸಿದ ಪರೀಕ್ಷೆಯಲ್ಲಿ 115 ಅಂಕ ಬಂದರೆ ?
ಹೌದು, ಇಂತಹದೊಂದು ಘಟನೆ ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ನೂರು ಅಂಕಗಳಿಗೆ ಪರೀಕ್ಷೆ ಬರೆದಿದ್ದ ಆರು ವಿದ್ಯಾರ್ಥಿಗಳು ನೂರಕ್ಕಿಂತಲೂ ಅಧಿಕ ಅಂಕಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಿಎಸ್ಸಿ ಪದವಿ ತರಗತಿಯ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂತಹದೊಂದು ಪ್ರಮಾದ ನಡೆದಿದೆ.
ನೂರು ಅಂಕದ ಗಣಿತ ಪರೀಕ್ಷೆಯನ್ನು ಬರೆದಿದ್ದ ಆರು ವಿದ್ಯಾರ್ಥಿಗಳ ಪೈಕಿ ನಾಲ್ವರಿಗೆ 115 ಹಾಗೂ ಇಬ್ಬರಿಗೆ 104 ಅಂಕ ಲಭಿಸಿದ್ದು, ಇದು ಪರೀಕ್ಷಾ ಮೌಲ್ಯಮಾಪಕರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ವಿಶ್ವವಿದ್ಯಾಲಯ ಇದೀಗ ಈ ಕುರಿತಂತೆ ತನಿಖೆಗೆ ಮುಂದಾಗಿದೆ.