ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರ ಮಧ್ಯೆಯೂ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಖರೀದಿಸಿ ತಮ್ಮೊಂದಿಗಿದ್ದವರಿಗೆ ಹಂಚಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಇದನ್ನು ಗಮನಿಸಿರುವ ಸಾರ್ವಜನಿಕ ದೂರು ವಿಭಾಗದ ರಾಜ್ಯ ನೋಡಲ್ ಅಧಿಕಾರಿ, ಪರಿಶೀಲನೆ ನಡೆಸಿ ವರದಿ ನೀಡುವಂತೆ ಹಾಸನ ಜಿಲ್ಲಾ ಎಂಸಿಎಂಸಿ ತಂಡಕ್ಕೆ ನಿರ್ದೇಶನ ನೀಡಿದ್ದಾರೆ.
ಸೋಮವಾರದಂದು ಹಾಸನದ ಮಹಾರಾಜ ಪಾರ್ಕ್ ಬಳಿ ಇರುವ ನಂದಿನಿ ಹಾಲಿನ ಬೂತ್ ನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿದ್ದ ಡಿ.ಕೆ. ಶಿವಕುಮಾರ್ ತಮ್ಮ ಜೊತೆಯಲ್ಲಿದ್ದವರಿಗೆ ಹಂಚಿದ್ದರು. ಇದರ ಮೊತ್ತ ಎರಡೂವರೆ ಸಾವಿರ ರೂಪಾಯಿಗಳಾಗಿತ್ತು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ನಂದಿನಿ ನಮ್ಮವಳು. ನಮ್ಮ ಹಾಲು, ನಮ್ಮ ಬದುಕು, ನಮ್ಮ ರೈತರು ಎಂದರಲ್ಲದೆ ರೈತರನ್ನು ಉಳಿಸಿಕೊಳ್ಳಬೇಕಿದೆ. ಸರ್ಕಾರ ಯಾವುದೇ ಕಾರಣಕ್ಕೂ ಅಮುಲ್ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂದಿದ್ದರು.