ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆ ಸಾಗರದ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ಸಾಹಿತಿ ಕೆ.ಎಸ್. ಭಗವಾನ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದ ಕಾರಣ ಬಂಧನ ಭೀತಿ ಎದುರಿಸುತ್ತಿದ್ದ ಭಗವಾನ್ ಅವರಿಗೆ ಸಾಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಹತ್ತು ದಿನಗಳ ಒಳಗಾಗಿ ಪೊಲೀಸರ ಮುಂದೆ ಹಾಜರಾಗಬೇಕು ಹಾಗೂ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ನೀಡುವಂತೆ ಆದೇಶಿಸಿದೆ.
ಪ್ರಕರಣದ ವಿವರ: ರಾಮ ಮಂದಿರ ಏಕೆ ಬೇಡ ? ಎಂಬ ಭಗವಾನ್ ಅವರ ಕೃತಿ ಬಿಡುಗಡೆ ಮಾಡಬಾರದು ಎಂದು ಸಾಗರ ತಾಲೂಕಿನ ಇಕ್ಕೇರಿಯ ಮಹಾಬಲೇಶ್ವರ ಎಂಬವರು ಖಾಸಗಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು, ಹಲವು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಭಗವಾನ್ ಅವರಿಗೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿತ್ತು.