ನಾಡಿನೆಲ್ಲೆಡೆ ಇಂದು ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆ ಮುಂಭಾಗವನ್ನು ತಳಿರು ತೋರಣಗಳಿಂದ ಅಲಂಕರಿಸಿರುವ ಭಕ್ತರು ಪೂಜೆ ಬಳಿಕ ಹಬ್ಬದ ಅಡುಗೆಗೆ ಸಜ್ಜಾಗುತ್ತಿದ್ದಾರೆ.
ಇದರ ಮಧ್ಯೆ ಧಾರ್ಮಿಕ ದತ್ತಿ ಇಲಾಖೆಯು ಕೂಡ ಮಹತ್ವದ ತೀರ್ಮಾನ ಕೈಗೊಂಡಿದ್ದು, ತನ್ನ ಅಧೀನದಲ್ಲಿ ಬರುವ ಪ್ರಮುಖ ದೇವಾಲಯಗಳಲ್ಲಿ ಈ ಹಬ್ಬವನ್ನು ‘ಧಾರ್ಮಿಕ ಆಚರಣೆ’ ಯನ್ನಾಗಿ ವಿಶೇಷವಾಗಿ ಆಚರಿಸಲು ಸೂಚನೆ ನೀಡಲಾಗಿದೆ.
ಈ ದಿನದಂದು ದೇವಾಲಯದ ಮುಂಭಾಗವನ್ನು ತೆಂಗಿನ ಗರಿಯ ಚಪ್ಪರ, ಹೂವಿನ ಅಲಂಕಾರ, ಬಣ್ಣ ಬಣ್ಣದ ರಂಗೋಲಿಯೊಂದಿಗೆ ಅಲಂಕರಿಸಬೇಕು. ಹಾಗೂ ಸಂಜೆ 4 ರಿಂದ 6:30 ಗಂಟೆ ಒಳಗೆ ಗೋಧೂಳಿ ಲಗ್ನದಲ್ಲಿ ಹಸುವನ್ನು ಪೂಜಿಸುವಂತೆ ತಿಳಿಸಲಾಗಿದೆ.
ಅಲ್ಲದೆ ದೇವಾಲಯಕ್ಕೆ ಬರುವ ಭಕ್ತರಿಗೆ ಬೇವು – ಬೆಲ್ಲ ವಿತರಿಸಬೇಕು ಎಂದು ತಿಳಿಸಲಾಗಿದ್ದು, ಜೊತೆಗೆ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಸಿಹಿ ಪ್ರಸಾದ ಹಂಚಬೇಕು. ಹಾಗೆಯೇ ಬೆಳಗ್ಗೆ ಅಥವಾ ಸಂಜೆ ಭಜನೆ, ಪ್ರಾರ್ಥನೆ, ಸುಗಮ ಸಂಗೀತ, ಭರತನಾಟ್ಯ ಮೊದಲಾದ ಸ್ಥಳೀಯವಾಗಿ ಲಭ್ಯವಾಗುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಲಾಗಿದೆ.