ಬಲಗೈಯ ಮೇಲೆ ಧಾರ್ಮಿಕ ಹಚ್ಚೆ ಇದೆ ಎಂದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಇತರ ಪಡೆಗಳಲ್ಲಿ ನೇಮಕಾತಿಗೆ ಅನರ್ಹ ಎಂದು ಘೋಷಿಸಿದ ಬಳಿಕ ಹುದ್ದೆ ಆಕಾಂಕ್ಷಿಯು ಅಧಿಕಾರಿಗಳ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ.
ಅಧಿಕಾರಿಗಳ ಪರ ವಕೀಲರು ಮನವಿಯನ್ನು ವಿರೋಧಿಸಿ ಮತ್ತು ಗೃಹ ಸಚಿವಾಲಯದ ಸಂಬಂಧಿತ ಮಾರ್ಗಸೂಚಿಗಳ ಅಡಿಯಲ್ಲಿ ನೇಮಕಾತಿ ವೇಳೆ ಟ್ಯಾಟೂವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.
ಸಣ್ಣ ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ಹಚ್ಚೆ ತೆಗೆಯಲು ಸಿದ್ಧರಿರುವುದಾಗಿ ಅರ್ಜಿದಾರರು ತಿಳಿಸಿದ್ದು, ವಿವರವಾದ ವೈದ್ಯಕೀಯ ಪರೀಕ್ಷೆಯಲ್ಲಿ ಬೇರೆ ಯಾವುದೇ ದೋಷಗಳು ಕಂಡುಬಂದಿಲ್ಲವೆಂದು ನ್ಯಾಯಾಲಯವು ಗಮನಿಸಿದೆ. ಹೀಗಾಗಿ ಹಚ್ಚೆ ತೆಗೆದ ನಂತರ ಅಧಿಕಾರಿಗಳು ರಚಿಸಿರುವ ಹೊಸ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗಲು ವ್ಯಕ್ತಿಗೆ ಸ್ವಾತಂತ್ರ್ಯ ನೀಡುವ ಮೂಲಕ ಅರ್ಜಿಯನ್ನು ವಿಲೇವಾರಿ ಮಾಡಿದೆ.
ನ್ಯಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಲಗೈಯ ಹಿಂಭಾಗದಲ್ಲಿನ ಹಚ್ಚೆ ತೆಗೆಸಿದ ನಂತರ ಇಂದಿನಿಂದ ಎರಡು ವಾರಗಳ ನಂತರ ಹೊಸದಾಗಿ ರಚಿಸಲಾದ ಪ್ರತಿವಾದಿಗಳ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ನೀಡುವ ಮೂಲಕ ನಾವು ಪ್ರಸ್ತುತ ಅರ್ಜಿಯನ್ನು ವಿಲೇವಾರಿ ಮಾಡುತ್ತೇವೆ. ಎಂದು ನ್ಯಾಯಾಲಯ ಹೇಳಿದೆ.
ಒಂದು ವೇಳೆ ಅರ್ಜಿದಾರರು ಅರ್ಹರು ಎಂದು ವೈದ್ಯಕೀಯ ಮಂಡಳಿಯು ಕಂಡುಕೊಂಡರೆ, ಪ್ರತಿವಾದಿಗಳು ಕಾನೂನಿನ ಪ್ರಕಾರ ಪ್ರಶ್ನೆಯಲ್ಲಿರುವ ಹುದ್ದೆಗೆ ಅರ್ಜಿದಾರರ ಆಯ್ಕೆಯನ್ನು ಮತ್ತಷ್ಟು ಪ್ರಕ್ರಿಯೆಗೊಳಿಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಸೌರಭ್ ಬ್ಯಾನರ್ಜಿ ಅವರ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು ಅಸ್ಸಾಂನಲ್ಲಿ ಸೆಪ್ಟೆಂಬರ್ 28 ರಂದು ಮತ್ತು ಸೆಪ್ಟೆಂಬರ್ 29 ರಂದು ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಬಲಗೈಯ ಹಿಂಭಾಗದಲ್ಲಿ ಧಾರ್ಮಿಕ ಹಚ್ಚೆ ಗುರುತುಗಳನ್ನು ಹೊಂದಿದ್ದರಿಂದ ನೇಮಕಾತಿಗೆ ಅನುಮತಿಸಿರಲಿಲ್ಲ. ತಮ್ಮ ಎರಡು ಪರೀಕ್ಷೆಗಳ ಫಲಿತಾಂಶವನ್ನು ರದ್ದುಗೊಳಿಸಿ ತನ್ನನ್ನು ಹುದ್ದೆಗೆ ನೇಮಿಸುವಂತೆ ಅರ್ಜಿದಾರರು ಕೋರಿದ್ದರು.