ಬೆಂಗಳೂರು: ರಾಜ್ಯ ಸರ್ಕಾರ ಧಾರ್ಮಿಕ ಕೇಂದ್ರಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 25ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಕೊರೊನಾ ಎರಡನೇ ಅಲೆಯಿಂದಾಗಿ ಧಾರ್ಮಿಕ ಕೇಂದ್ರಗಳಲ್ಲಿ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ಇದೀಗ ಹಂತ ಹಂತವಾಗಿ ನಿರ್ಬಂಧ ಸಡಿಲಿಸಲಾಗಿದ್ದು, ಕೋವಿಡ್ ನಿಯಮ ಕಡ್ಡಾಯ ಪಾಲನೆಯೊಂದಿಗೆ ನಾಳೆಯಿಂದ ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ದೇಗುಲ, ಮಸೀದಿ, ಚರ್ಚ್, ಗುರುದ್ವಾರಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದ್ದು, ಪೂಜೆ ಪುನಸ್ಕಾರಗಳಿಗೂ ಅನುಮತಿ ನೀಡಲಾಗಿದೆ. ಆದರೆ ಯಾವುದೇ ರೀತಿಯ ಜಾತ್ರೆ, ದೇವರ ಉತ್ಸವ, ಹಬ್ಬ, ಮೆರವಣಿಗೆಗಳಿಗೆ ಅವಕಾಶವಿಲ್ಲ. ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಭೆ-ಸಮಾರಂಭಗಳನ್ನು ನಡೆಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.