ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತಮ್ಮ ನಿರ್ಧಾರ ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರದಲ್ಲಿ ಪೂರಕ ವಾತಾವರಣ ಇಲ್ಲವೆಂದು ಹೈಕಮಾಂಡ್ ನಾಯಕರು ಮನವರಿಕೆ ಮಾಡಿಕೊಟ್ಟ ಬಳಿಕ ಸಿದ್ದರಾಮಯ್ಯ ತಮಗೆ ಸುರಕ್ಷಿತ ಕ್ಷೇತ್ರ ಎನಿಸಿರುವ ವರುಣಾದಿಂದಲೇ ಈ ಬಾರಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಸಿದ್ದರಾಮಯ್ಯನವರಿಗೆ ಎದುರಾಳಿ ಎಂದು ಹೇಳಲಾಗುತ್ತಿರುವ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದ್ದು, ಧಮ್ಮು, ತಾಕತ್ತು ಇದ್ದರೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವರ್ತೂರು ಪ್ರಕಾಶ್, ಸಿದ್ದರಾಮಯ್ಯ ನನ್ನನ್ನು ಚಿಲ್ಲರೆ ಎಂದು ಹೇಳಿದ್ದರು. ತಾಕತ್ತಿದ್ದರೆ ಈ ಚಿಲ್ಲರೆ ಎದುರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದರು. ಅಲ್ಲದೆ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರೂ ಅಲ್ಲ. ಕುರುಬರನ್ನು ಹಾಳು ಮಾಡಬೇಕೆಂದು ಅವರು ಕೋಲಾರ ಕ್ಷೇತ್ರಕ್ಕೆ ಬರಲು ಮುಂದಾಗಿದ್ದರು ಎಂದು ತಿಳಿಸಿದರು.