ದ್ವೇಷಪೂರಿತ ಭಾಷಣದ ಘಟನೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಟಿವಿ ವಾಹಿನಿಗಳ ನಡೆಯನ್ನು ತೀವ್ರವಾಗಿ ಟೀಕಿಸಿದೆ. ಈ ವಿಚಾರದಲ್ಲಿ ನಿರೂಪಕರ ಪಾತ್ರವು “ತುಂಬಾ ನಿರ್ಣಾಯಕ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
”ರಾಜಕೀಯ ಪಕ್ಷಗಳು ಬಂಡವಾಳ ಹೂಡುತ್ತಿವೆ. ಟಿವಿಗಳು ಅವುಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಮಾಧ್ಯಮ ಹಾಗೂ ಟಿವಿಗಳಲ್ಲಿ ದ್ವೇಷಪೂರಿತ ಮಾತು, ಭಾಷಣಗಳು ಪ್ರಸಾರವಾಗುತ್ತಿವೆ. ಇವುಗಳಲ್ಲಿ ವಾಹಿನಿಗಳ ನಿರೂಪಕರ ಪಾತ್ರ ಬಹಳ ನಿರ್ಣಾಯಕವಾಗಿದೆ” ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಬಾರಿ ಮಾತನಾಡಲು ಬಯಸುವವರು ಮ್ಯೂಟ್ ಆಗಿರುತ್ತಾರೆ ಎಂದು ಅವರು ಹೇಳಿದರು. ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ಸರ್ಕಾರ ಏಕೆ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂದು ನ್ಯಾಯಮೂರ್ತಿ ಜೋಸೆಫ್ ಪ್ರಶ್ನಿಸಿದರು. “ಸರ್ಕಾರವು ವಿರೋಧಾತ್ಮಕ ನಿಲುವನ್ನು ತೆಗೆದುಕೊಳ್ಳಬಾರದು ಆದರೆ ಸಹಾಯ ಮಾಡಬೇಕು. ನೀವು ಯಾಕೆ ಕೌಂಟರ್ ಸಲ್ಲಿಸಿಲ್ಲ? ಎಂದವರು ಕೇಳಿದ್ದಾರೆ.
ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ”ಚಾನೆಲ್‌ಗಳು ಮತ್ತು ರಾಜಕಾರಣಿಗಳು ಇಂತಹ ಭಾಷಣಗಳನ್ನು ಪೋಷಿಸುತ್ತಿದ್ದಾರೆ. ಚಾನೆಲ್‌ಗಳು ಹಣ ಪಡೆಯುತ್ತವೆ, 10 ಜನರನ್ನು ಚರ್ಚೆಯಲ್ಲಿ ಕೂರಿಸುತ್ತಾರೆ. ಈ ಉದ್ಯಮವು ಹೆಚ್ಚು ಅನಿಯಂತ್ರಿತವಾಗಿದೆ ”ಎಂದರು.ಇಂತಹ ಪ್ರಕರಣವೊಂದರಲ್ಲಿ ಬ್ರಿಟನ್ ನ್ಯಾಯಾಲಯ ವಾಹಿನಿಗೆ ಭಾರೀ ದಂಡ ವಿಧಿಸಿದೆ. ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ.