ಇನ್ಷೂರೆನ್ಸ್ ಪಾಲಿಸಿ ಖರೀದಿ ಮಾಡಿದ್ರೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಅನ್ನೋದು ದ್ವಿಚಕ್ರ ವಾಹನ ವಿಮೆ ಮಾಡಿಸುವ ಬಹುತೇಕರ ಭಾವನೆ. ಆದ್ರೆ ಪಾಲಿಸಿ ಖರೀದಿಯಿಂದ ಆಗುವುದು ಅರ್ಧದಷ್ಟು ಕೆಲಸ ಮಾತ್ರ. ಯಶಸ್ವಿಯಾಗಿ ಇನ್ಷೂರೆನ್ಸ್ ಕ್ಲೈಮ್ ಆಗಬೇಕು ಅಂದರೆ ಸಾಕಷ್ಟು ಅಡೆತಡೆಗಳಿರುತ್ತವೆ.
ಪಾಲಿಸಿದಾರರು ಕ್ಲೈಮ್ ರಿಕ್ವೆಸ್ಟ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಯಾವುದೇ ಅಪಘಾತದ ಸಂದರ್ಭದಲ್ಲಿ ಪಾಲಿಸಿದಾರರ ವೆಚ್ಚವನ್ನು ಸರಿದೂಗಿಸುವ ದ್ವಿಚಕ್ರ ವಾಹನ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಿಮ್ಮ ಇನ್ಷೂರೆನ್ಸ್ ಕ್ಲೈಮ್ ಆಗದೇ ತಿರಸ್ಕೃತವಾಗಬಹುದು.
ದ್ವಿಚಕ್ರ ವಾಹನದ ಇನ್ಷೂರೆನ್ಸ್ ಕ್ಲೈಮ್ ವಿನಂತಿ ಹಲವು ಕಾರಣಗಳಿಗೆ ತಿರಸ್ಕೃತವಾಗುತ್ತದೆ. ಸಾಮಾನ್ಯವಾಗಿ ಇದು ಕಂಪನಿಯ ಕೆಲವೊಂದು ನಿಯಮಗಳನ್ನು ಅವಲಂಬಿಸಿರುತ್ತದೆ. ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕೂಡ ಇನ್ಷೂರೆನ್ಸ್ ತಿರಸ್ಕೃತವಾಗಲು ಒಂದು ಕಾರಣ.
ಡ್ರಗ್ಸ್ ಅಥವಾ ಅಲ್ಕೋಹಾಲ್ ಸೇವಿಸಿ ವಾಹನ ಓಡಿಸುತ್ತಿದ್ರೆ, ಅಪಘಾತ ನಡೆದ ಸಂದರ್ಭದಲ್ಲಿ ಅಪಾಯಕಾರಿ ಸ್ಟಂಟ್ ಗಳನ್ನು ಮಾಡಿದ್ದರೆ ಬೈಕ್ ಇನ್ಷೂರೆನ್ಸ್ ಕಂಪನಿ ಪಾಲಿಸಿದಾರನ ವಿನಂತಿಯನ್ನು ತಿರಸ್ಕರಿಸಬಹುದು. ಪಾಲಿಸಿ ಪಡೆದ ಬಳಿಕ ಕಂತಿನ ಹಣವನ್ನು ಸರಿಯಾಗಿ ಕಟ್ಟಿದರೆ ಇನ್ಷೂರೆನ್ಸ್ ಕ್ಲೈಮ್ ಮಾಡುವ ಸಮಯದಲ್ಲಿ ಸಮಸ್ಯೆಯಾಗುವುದಿಲ್ಲ. ಕೊನೆ ದಿನಾಂಕಕ್ಕೂ ಮುನ್ನವೇ ಪ್ರೀಮಿಯಂ ಹಣವನ್ನು ಪಾವತಿ ಮಾಡಿ.
ಅಪಘಾತದ ವಿವರಗಳನ್ನು ಚಾಚೂ ತಪ್ಪದೆ ಹೇಳಬೇಕು. ಕೆಲವೊಂದು ಮಹತ್ವದ ಮಾಹಿತಿಗಳನ್ನು ಮುಚ್ಚಿಟ್ಟರೆ ಇನ್ಷೂರೆನ್ಸ್ ಹಣ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಬೈಕ್ ಗೆ ಒಂದಷ್ಟು ಬದಲಾವಣೆ ಮಾಡಲು ಸವಾರರು ಇಚ್ಛಿಸುತ್ತಾರೆ. ಈ ಬದಲಾವಣೆ ಪ್ರೀಮಿಯಂ ಮೊತ್ತದಲ್ಲಿ ಹೆಚ್ಚಳವಾಗುವಂತಿದ್ದರೆ ಅದನ್ನು ಮೊದಲೇ ತಿಳಿಸಬೇಕು. ಮೊದಲು ಮಾಹಿತಿ ನೀಡದೇ ಇದ್ದಲ್ಲಿ ಇದೇ ಕಾರಣವಿಟ್ಟುಕೊಂಡು ಕಂಪನಿ ಇನ್ಷೂರೆನ್ಸ್ ಕ್ಲೈಮ್ ಅನ್ನು ರಿಜೆಕ್ಟ್ ಮಾಡಬಹುದು.
ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವಾಗ ಪಾಲಿಸಿಯನ್ನು ಕೂಡ ವರ್ಗಾಯಿಸುವುದು ಅವಶ್ಯಕ. ಅಪಘಾತ ನಡೆದ ಸಂದರ್ಭದಲ್ಲಿ ಪಾಲಿಸಿ ಮೊದಲ ಮಾಲೀಕನ ಹೆಸರಿನಲ್ಲಿದ್ದರೆ ಇನ್ಷೂರೆನ್ಸ್ ಹಣ ದೊರೆಯುವುದಿಲ್ಲ. ಅಪಘಾತ ನಡೆದ ತಕ್ಷಣ ಬೈಕ್ ಸವಾರರು ಕಂಪನಿಗೆ ಮಾಹಿತಿ ಕೊಡುವುದೇ ಇಲ್ಲ. ಗಾಡಿಯನ್ನು ರಿಪೇರಿ ಮಾಡಿಸಿ ನಂತರ ಹಣಕ್ಕಾಗಿ ಕ್ಲೈಮ್ ಮಾಡುತ್ತಾರೆ. ಹೀಗೆ ಮಾಡಿದಲ್ಲಿ ಬೈಕ್ ಗೆ ಎಷ್ಟು ಹಾನಿಯಾಗಿದೆ, ರಿಪೇರಿಗೆಷ್ಟು ಖರ್ಚಾಗಿದೆ ಅನ್ನೋದನ್ನು ಪತ್ತೆ ಮಾಡುವುದು ಕಂಪನಿಗೆ ಕಷ್ಟವಾಗುತ್ತದೆ.