ಬ್ರೆಸಿಲಿಯ: ಸರೋವರದ ಜಲಪಾತದ ಬಳಿ ಪ್ರವಾಸಿಗರು ಬೋಟ್ ನಲ್ಲಿ ಸಂಚರಿಸುತ್ತಿದ್ದರೆ, ಇದ್ದಕ್ಕಿದ್ದಂತೆ ಕಣಿವೆಯ ಕಲ್ಲುಬಂಡೆಯ ಗೋಡೆ ಕುಸಿದು ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿರೋ ಅವಘಡ ಬ್ರೆಜಿಲ್ ನಲ್ಲಿ ಸಂಭವಿಸಿದೆ.
ಭಯನಕ ಘಟನೆಯ ದೃಶ್ಯವು ಅಲ್ಲೇ ಇದ್ದ ಕೆಲವು ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ದುರ್ಘಟನೆಯಲ್ಲಿ 20 ಮಂದಿ ನಾಪತ್ತೆಯಾಗಿದ್ದು, 32 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಫರ್ನಾಸ್ ಸರೋವರದ ಮೇಲಿನ ಬಂಡೆಯ ಬಳಿ ದೋಣಿಗಳಲ್ಲಿ ಕುಳಿತ ಪ್ರವಾಸಿಗರು ವಿಹಾರ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬಂಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೂಡಲೇ ದೈತ್ಯ ಬಂಡೆ ಅಲ್ಲೇ ಇದ್ದ ಎರಡು ದೋಣಿಗಳ ಮೇಲೆ ಬಿದ್ದು, ದುರಂತ ಸಂಭವಿಸಿದೆ. ಸೋ ಜೋಸ್ ಡ ಬರ್ರಾ ಮತ್ತು ಕ್ಯಾಪಿಟೋಲಿಯೊ ನಗರಗಳ ಬಳಿ ಇರುವ ಸರೋವರದಲ್ಲಿ ಅಪಘಾತ ಸಂಭವಿಸಿದೆ.
ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು 1958 ರಲ್ಲಿ ನಿರ್ಮಿಸಲಾದ ಫರ್ನೇಸ್ ಲೇಕ್, ಸೋ ಪಾಲೊದಿಂದ ಉತ್ತರಕ್ಕೆ 420 ಕಿ.ಮೀ (260 ಮೈಲಿ) ಪ್ರದೇಶದಲ್ಲಿ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಈ ನಗರವು ವಾರಾಂತ್ಯದಲ್ಲಿ ಸುಮಾರು 5,000 ಪ್ರವಾಸಿಗರು ಮತ್ತು ರಜಾದಿನಗಳಲ್ಲಿ 30,000 ದವರೆಗೆ ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಾರೆ.