ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ವಿಚಾರ ತೀವ್ರ ಕುತೂಹಲ ಕೆರಳಿಸಿದ್ದು, ಭಾನುವಾರದಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ ಮುಖಂಡರ ಸಭೆ ರದ್ದಾಗಿರುವ ಬೆನ್ನಲ್ಲೇ ಈ ವಿಚಾರ ಈಗ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅಂಗಳಕ್ಕೆ ಬಂದು ತಲುಪಿದೆ. ಈ ವಾರದೊಳಗೆ ಹಾಸನಕ್ಕೆ ಭೇಟಿ ನೀಡಲಿರುವ ದೇವೇಗೌಡರು ಯಾರಿಗೆ ಟಿಕೆಟ್ ಎಂಬುದನ್ನು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಈ ಕ್ಷೇತ್ರದಿಂದ ಕಣಕ್ಕಿಳಿಯಲು ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಉತ್ಸುಕರಾಗಿದ್ದು, ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಅವರಿಗೆ ಪತಿ ರೇವಣ್ಣ, ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ಸಾಥ್ ನೀಡಿದ್ದು, ಅಭಿಮಾನಿಗಳು, ಕಾರ್ಯಕರ್ತರು ಸಹ ಮನೆಮನೆಗೆ ತೆರಳಿ ಮತ ನೀಡುವಂತೆ ಕೋರುತ್ತಿದ್ದಾರೆ.
ಇನ್ನು ಮತ್ತೊಬ್ಬ ಆಕಾಂಕ್ಷಿ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಕೂಡ ಪ್ರಚಾರ ಕಾರ್ಯ ಆರಂಭಿಸಿದ್ದು, ಇವರಿಗೆ ಟಿಕೆಟ್ ನೀಡುವ ಕುರಿತಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಒಲವು ಹೊಂದಿದ್ದಾರೆ. ಆದರೆ ಭವಾನಿ ರೇವಣ್ಣ ಆಕಾಂಕ್ಷಿಯಾಗಿರುವ ಕಾರಣ ಈ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಮೂಲಕ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದ್ದ ಜೆಡಿಎಸ್ ನಾಯಕರಿಗೆ ಒಂದಷ್ಟು ಹಿನ್ನಡೆಯಾದಂತಾಗಿದೆ.