ಚಳಿಗಾಲದಲ್ಲಿ ದೊಡ್ಡ ಪತ್ರೆಯ ಪ್ರಯೋಜನ ಹೆಚ್ಚು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರಂತೂ ಮಕ್ಕಳಿಗೆ ಶೀತ, ಕೆಮ್ಮು ಕಾಣಿಸಿಕೊಂಡಾಗ ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸುವುದು ಬಹಳ ಒಳ್ಳೆಯದು.
ಮನೆಯ ಅಂಗಳದಲ್ಲಿ ಇಲ್ಲವೇ ಹೂಕುಂಡದಲ್ಲಿ ಇದನ್ನು ನೆಟ್ಟು ಬೆಳೆಸಿ. ದೊಡ್ಡ ಪತ್ರೆ ಅಥವಾ ಸಾಂಬಾರ ಬಳ್ಳಿಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲಿಟ್ಟರೆ ಮಕ್ಕಳ ಜ್ವರ ಕಡಿಮೆಯಾಗುತ್ತದೆ. ಹಸಿಯಾಗಿ ಇದರ ರಸ ಸೇವಿಸುವುದರೊಂದಿಗೆ ಅಡುಗೆ ಮನೆಯಲ್ಲಿ ಚಟ್ನಿ, ತಂಬುಳಿ, ಕಷಾಯ ರೂಪದಲ್ಲಿಯೂ ಸೇವಿಸಬಹುದು.
ಬೇಸಿಗೆಗೆ ಸೆಖೆ ಹೆಚ್ಚಾಗಿ ಬೊಕ್ಕೆಗಳು ಬಿದ್ದಾಗ, ವಿನಾಕಾರಣ ಮೈತುರಿಕೆ ಕಾಣಿಸಿಕೊಂಡಾಗ ಸಾಂಬ್ರಾಣಿ ಎಲೆಗಳನ್ನು ಆ ಜಾಗಕ್ಕೆ ಉಜ್ಜಿ ಇಲ್ಲವೇ ರಸ ತೆಗೆದು ಅಲ್ಲಿಗೆ ಹಚ್ಚಿ. ಇದರಿಂದ ತುರಿಕೆಯೂ, ಉರಿಯೂ ಕಡಿಮೆಯಾಗುತ್ತದೆ.
ಇದರ ಕಷಾಯ ತಯಾರಿ ವೇಳೆ ಕಾಳುಮೆಣಸು, ತುಸು ಬೆಲ್ಲ, ಶುಂಠಿ ಬೆರೆಸಿದರೆ ಕೆಮ್ಮು, ಗಂಟಲು ಕಟ್ಟುವ ಲಕ್ಷಣಗಳು ದೂರವಾಗುತ್ತವೆ. ಹಳದಿ ರೋಗಕ್ಕೂ ಮನೆಮದ್ದಾಗಿ ಸಾಮ್ರಾಣಿ ಎಲೆಗಳನ್ನು ಬಳಸುತ್ತಾರೆ.