ಅನೇಕರಿಗೆ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಕಾಫಿ ಬೇಕೇ ಬೇಕು. ಒಂದು ಕಪ್ ಕಾಫಿ ಕುಡಿಯದೇ ಇದ್ರೆ ಕೆಲಸ ಮಾಡೋದು ಅಸಾಧ್ಯ ಎನ್ನುವವರೂ ಇದ್ದಾರೆ. ಈ ಅಭ್ಯಾಸವು ನಿಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅನ್ನೋದು ಹೊಸ ವಿಚಾರ.
ಆದ್ರೆ ತೂಕ ಇಳಿಸೋದು ನೀವು ದಿನ ನಿತ್ಯ ಕುಡಿಯುವ ಬ್ರೌನ್ ಕಾಫಿಯಲ್ಲ. ಸಂಶೋಧಕರ ಪ್ರಕಾರ ಗ್ರೀನ್ ಕಾಫಿಯನ್ನು ಆಹಾರದ ಜೊತೆಗೆ ನಿಯಮಿತವಾಗಿ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರಿಂದ ಹೆಚ್ಚುವರಿ ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು.
ಹಸಿರು ಕಾಫಿ ಬೀಜಗಳನ್ನು ಹುರಿಯುವುದಿಲ್ಲ. ಹಾಗಾಗಿ ಕ್ಲೋರೊಜೆನಿಕ್ ಆಮ್ಲದ ಅಂಶ ಇದರಲ್ಲಿರುತ್ತದೆ. ಇದು ಆ್ಯಂಟಿ ಒಕ್ಸಿಡೆಂಟ್ ಆಗಿ ಕೆಲಸ ಮಾಡಬಲ್ಲದು. ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿರುವ ಒತ್ತಡವನ್ನು ನಿಭಾಯಿಸಲು ಸಹ ಸಹಾಯ ಮಾಡುತ್ತದೆ. ಕ್ಲೋರೊಜೆನಿಕ್ ಆಮ್ಲವು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹೆಚ್ಚುವರಿ ಕೊಬ್ಬನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಇದು ಯಕೃತ್ತಿನ ಮೂಲಕ ರಕ್ತಪ್ರವಾಹದಲ್ಲಿನ ಗ್ಲೂಕೋಸ್ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ, ನಿಮ್ಮ ದೇಹವು ಹೆಚ್ಚುವರಿ ಕೊಬ್ಬನ್ನು ಸುಡಲು ಪ್ರಾರಂಭಿಸುತ್ತದೆ ಮತ್ತು ನೀವು ತೂಕವನ್ನು ಕಳೆದುಕೊಳ್ಳುತ್ತೀರಿ.
ಗ್ರೀನ್ ಕಾಫಿ ಮಾಡುವುದು ಸುಲಭ. ಬ್ಲಾಕ್ ಕಾಫಿಯಂತೆಯೇ ಇದನ್ನು ತಯಾರಿಸಿಕೊಳ್ಳಿ. ಹೆಚ್ಚಿನ ಘಮ ಬೇಕೆಂದರೆ ಜೇನುತುಪ್ಪ ಮತ್ತು ದಾಲ್ಚಿನಿಯನ್ನು ಬೆರೆಸಬಹುದು. ಊಟವಾದ ತಕ್ಷಣ ಗ್ರೀನ್ ಕಾಫಿ ಸೇವಿಸಿದ್ರೆ ಪರಿಣಾಮ ಉತ್ತಮವಾಗಿರುತ್ತದೆ.