ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಮುಖದಲ್ಲಿ ಮೊಡವೆ, ಕಾಲಲ್ಲಿ ಬಿರುಕು ಮೊದಲಾದ ಸಮಸ್ಯೆಗಳ ಲಕ್ಷಣಗಳು ಕಂಡು ಬರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮಾತ್ರೆಯೇ ಪರಿಹಾರವಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ಮದ್ದುಗಳಿವೆ.
ಹೆಚ್ಚು ನೀರು ಕುಡಿದಷ್ಟು ನಿಮ್ಮ ದೇಹ ಹೆಚ್ಚು ಉಷ್ಣಾಂಶವನ್ನು ಹೊರ ಹಾಕುತ್ತದೆ. ದೇಹ ಆಯಾಸಗೊಳ್ಳುವುದೂ ತಪ್ಪುತ್ತದೆ. ದಿನಕ್ಕೆ 10 ರಿಂದ 12 ಲೋಟ ನೀರು ಮರೆಯದೆ ಕುಡಿಯಿರಿ.
ಕಲ್ಲಂಗಡಿ ಹಣ್ಣನ್ನು ತಿನ್ನಿ. ಇದರಲ್ಲಿ ನಾರಿನಂಶ ಮತ್ತು ವಿಟಮಿನ್ ಎ, ಸಿ ಗಳು ಹೇರಳವಾಗಿವೆ. ಇವು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುತ್ತದೆ. ಇದರಂತೆ ಕರಬೂಜ ಹಣ್ಣಿನ ಸೇವನೆಯೂ ಬಹಳ ಒಳ್ಳೆಯದು.
ನೀರಿನಂಶ ಹೇರಳವಾಗಿರುವ ಮುಳ್ಳುಸೌತೆ ಸೇವನೆಯೂ ಒಳ್ಳೆಯದೇ. ಇದು ನಿಮ್ಮ ತ್ವಚೆಗೆ ಹೊಳಪು ನೀಡುವ ಜೊತೆಗೆ ಉಷ್ಣಾಂಶದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಎಳನೀರು ಸೇವನೆಯಿಂದ ಬಾಯಿಯಲ್ಲಿ ಬಂದಿರುವ ಉಷ್ಣ ಬೊಕ್ಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ.
ನೀರಿಗೆ ಏಲಕ್ಕಿ ಹಾಕಿ ಕುದಿಸಿ ಕಷಾಯ ರೂಪದಲ್ಲಿ ಬೆಳಿಗ್ಗೆ ಸಂಜೆ ಕುಡಿಯುವುದರಿಂದಲೂ ದೇಹ ತಂಪಾಗುತ್ತದೆ. ಮೆಂತೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರಿನ ಸಮೇತ ಮೆಂತೆ ಕಾಳು ಸೇವಿಸುವುದರಿಂದ ಕೂಡಲೆ ನಿಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.