ಬೇಸಗೆಯಲ್ಲಿ ಮಾತ್ರವಲ್ಲ ಮಳೆಗಾಲ ಚಳಿಗಾಲದಲ್ಲೂ ದೇಹಕ್ಕೆ ಉಷ್ಣದ ಸಮಸ್ಯೆ ಕಾಡೀತು. ವಿಪರೀತ ಖಾರದ ವಸ್ತುಗಳನ್ನು ತಿಂದ ಒಂದೆರಡು ದಿನಗಳಲ್ಲಿ ಬಾಯಿಯಲ್ಲಿ ಗುಳ್ಳೆ ಸೇರಿದಂತೆ ಹಲವು ವಿವಿಧ ಉಷ್ಣ ಸಂಬಂಧಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವುಗಳ ನಿವಾರಣೆಗೆ ಕೆಲವು ಮನೆ ಮದ್ದುಗಳಿವೆ.
ಸೂರ್ಯನ ಬಿಸಿಲಿಗೆ ನೇರವಾಗಿ ಒಗ್ಗಿಕೊಂಡಾಗ, ಕೆಲಸ ಮಾಡಿದಾಗ ದೇಹದ ಉಷ್ಣತೆ ವಿಪರೀತ ಹೆಚ್ಚುತ್ತದೆ. ಆಗ ದಿನಕ್ಕೊಂದು ಎಳನೀರು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹ ತಂಪಾಗುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ದುರ್ವಾಸನೆ ಬರುವುದೂ ತಪ್ಪುತ್ತದೆ.
ಜೀರಿಗೆ ಮತ್ತು ಬಿಳಿ ಕಲ್ಲು ಸಕ್ಕರೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ನುಣ್ಣಗೆ ಪುಡಿ ಮಾಡಿ. ಡಬ್ಬದಲ್ಲಿ ಶೇಖರಿಸಿಡಿ. ಇದನ್ನು ದಿನಕ್ಕೆರಡು ಬಾರಿ ಸೇವಿಸಿ. ಇದರಿಂದ ದೇಹದ ಉಷ್ಣತೆ ತಗ್ಗುತ್ತದೆ.
ಮಜ್ಜಿಗೆಗೆ ನಿಂಬೆರಸ ಹಾಕಿ ಕುಡಿಯುವುದರಿಂದಲೂ ದೇಹ ತಂಪಾಗುತ್ತದೆ. ಆದರೆ ಇದನ್ನು ಮಧ್ಯಾಹ್ನ ಮಾತ್ರ ಸೇವಿಸಿ. ರಾತ್ರಿ ಕುಡಿದರೆ ಸೂಕ್ಷ್ಮ ದೇಹಿಗಳಿಗೆ ಶೀತವಾಗುವ ಸಾಧ್ಯತೆ ಹೆಚ್ಚು. ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ ರಾತ್ರಿ ಹಾಗೆ ಮುಚ್ಚಿಡಿ. ಬೆಳಿಗ್ಗೆ ಎದ್ದಾಕ್ಷಣ ಕುಡಿದರೆ ಸೆಕೆ ಬೊಕ್ಕೆಗಳು ಏಳುವುದು ಕಡಿಮೆಯಾಗುತ್ತದೆ.