
ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಮ್ಮ ಸೈನಿಕರನ್ನು ಎಷ್ಟು ನೆನೆದರೂ ಕಡಿಮೆಯೇ. ಆದ್ರೆ ನಮ್ಮನ್ನ ಪ್ರತಿಕ್ಷಣವೂ ಕಾಯುವ ಈ ಕಾವಲುಗಾರರೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಬೇಸರ ಹಾಗೂ ಕಳವಳಕಾರಿ ಸಂಗತಿ. ಇಷ್ಟೇ ಅಲ್ಲ ಭಯೋತ್ಪಾದನೆ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕರ್ತವ್ಯ ನಿರತ ಅರೆಸೇನಾ ಪಡೆಗಳಲ್ಲಿ ಹುತಾತ್ಮರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಿಆರ್‌ಪಿಎಫ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಯೋಧರು ಪ್ರಾಣ ತೆತ್ತಿದ್ದಾರೆ.
ಕಳೆದ 3 ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಭಯೋತ್ಪಾದಕ ಪೀಡಿತ ಪ್ರದೇಶಗಳಿಂದ ನಕ್ಸಲ್ ಹಾವಳಿ ಇರುವ ಸ್ಥಳಗಳಿಗೆ ನಿಯೋಜಿಸಲಾದ 950 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಮತ್ತೊಂದೆಡೆ ಸೈನಿಕರ ಆತ್ಮಹತ್ಯೆಯ ಅಂಕಿ-ಅಂಶಗಳಂತೂ ಆಘಾತಕಾರಿಯಾಗಿವೆ. 2021ರಲ್ಲಿ 153 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 56 ಸಿಆರ್‌ಪಿಎಫ್ ಯೋಧರು ಹಾಗೂ 42 ಮಂದಿ ಬಿಎಸ್‌ಎ ಯೋಧರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹತರಾದ ಸೈನಿಕರ ಸಂಖ್ಯೆ ಶೇ.57ರಷ್ಟಿದೆ. ಎಲ್ಲಾ ಪಡೆಗಳ ಯೋಧರನ್ನು ಒಟ್ಟುಗೂಡಿಸಿದರೆ, 2019ರಲ್ಲಿ 15 ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 622 ಯೋಧರು ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. 2020ರಲ್ಲಿ 14 ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 691 ಯೋಧರು ಮತ್ತು 2021ರಲ್ಲಿ 18 ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 729 ಯೋಧರು ಹುತಾತ್ಮರಾಗಿದ್ದಾರೆ.
ಗೃಹ ಸಚಿವಾಲಯದ ಮಾಹಿತಿ ಪ್ರಕಾರ 6 ವರ್ಷಗಳಲ್ಲಿ 2015 ರಿಂದ 2020ರವರೆಗೆ ನಡೆದ ಎನ್‌ಕೌಂಟರ್‌ಗಳಿಗಿಂತಲೂ, ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಎಸ್‌ಎಸ್‌ಬಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯ ಆತ್ಮಹತ್ಯೆಯಿಂದಲೇ ಹೆಚ್ಚಿನ ಸಾವು ಸಂಭವಿಸಿವೆ. 2015ರಿಂದ 2020ರ ನಡುವೆ ಸುಮಾರು 680 ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಮನೆ ಸೇರಿದ್ದಾರೆ.
323 ಯೋಧರು ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿದ್ದಾರೆ. ಅಂದರೆ ಸೈನಿಕರ ಆತ್ಮಹತ್ಯೆ ಪ್ರಕರಣಗಳು ಹುತಾತ್ಮರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಇವನ್ನೆಲ್ಲ ಗಮನಿಸಿದ್ರೆ ನಮ್ಮನ್ನು ಪ್ರತಿಕ್ಷಣವೂ ರಕ್ಷಿಸುವ ಸೈನಿಕರಿಗೇ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ.
ಕೌಟುಂಬಿಕ ಕಾರಣಗಳು, ತನ್ನವರಿಂದ ದೂರವಾಗಿ ಬದುಕಬೇಕಾದ ಅನಿವಾರ್ಯತೆಯಿಂದ ಮಾನಸಿಕ ಖಿನ್ನತೆ ಹಾಗೂ ಕಾಯಿಲೆಗಳು ಕೂಡ ಯೋಧರ ಆತ್ಮಹತ್ಯೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಸರ್ಕಾರದ ವತಿಯಿಂದ 25-45 ಲಕ್ಷ ರೂಪಾಯಿವರೆಗೆ ಏಕರೂಪ ಪರಿಹಾರ ನೀಡಲಾಗುತ್ತದೆ. ಭಾರತ್ ಕೆ ವೀರ್ ಪೋರ್ಟಲ್ ಮೂಲಕ ಸಾರ್ವಜನಿಕರು ಕೂಡ ಹುತಾತ್ಮರ ಕುಟುಂಬಗಳಿಗೆ ನೆರವಾಗಬಹುದು.