ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಗುರುತರ ಜವಾಬ್ದಾರಿ ಪೊಲೀಸರಿಗಿರುತ್ತದೆ. ಹೀಗಾಗಿಯೇ ಅವರುಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಾದ್ದು ಸರ್ಕಾರಗಳ ಕರ್ತವ್ಯವಾಗಿರುತ್ತದೆ. ಆದರೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾಹಿತಿಯೊಂದು ಆಘಾತಕಾರಿಯಾಗಿದೆ.
ಹೌದು, ದೇಶದ 63 ಪೊಲೀಸ್ ಠಾಣೆಗಳಲ್ಲಿ ಯಾವುದೇ ವಾಹನ ಸೌಲಭ್ಯ ಇಲ್ಲವೆಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರದಂದು ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಲ್ಲದೆ 628 ಪೊಲೀಸ್ ಠಾಣೆಗಳು ದೂರವಾಣಿ ಸಂಪರ್ಕವನ್ನೂ ಸಹ ಹೊಂದಿಲ್ಲವೆನ್ನಲಾಗಿದ್ದು, ಜೊತೆಗೆ 285 ಠಾಣೆಗಳಲ್ಲಿ ವಯರ್ಲೆಸ್ ಸೆಟ್ ಅಥವಾ ಮೊಬೈಲ್ ಫೋನ್ ಗಳನ್ನು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಒಟ್ಟು 17,535 ಪೊಲೀಸ್ ಠಾಣೆಗಳಿವೆ ಎಂದೂ ಸಹ ಸಚಿವರು ಮಾಹಿತಿ ನೀಡಿದ್ದಾರೆ.