ನವದೆಹಲಿ : ದೇಶದ ಎಲ್ಲಾ ಜನತೆಗೆ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಇರುವ ಡಿಜಿಟಲ್ ಕಾರ್ಡ್ ವಿತರಿಸಲಾಗುವುದು. ಪ್ರಧಾನಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಗೆ ಸೆ. 27ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಪ್ರತಿ ಪ್ರಜೆಗೂ ಆರೋಗ್ಯ ಕಾರ್ಡನ್ನು ನೀಡುವ ಪ್ರಧಾನಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಜಾರಿಯಲ್ಲಿದ್ದು, ಇದನ್ನು ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು.
ದೇಶದ ಎಲ್ಲ ಜನರಿಗೆ ಗುಣಮಟ್ಟದ ಮತ್ತು ಸಮಗ್ರವಾದ ಹಾಗೂ ಸುರಕ್ಷಿತ ಮತ್ತು ಸುಲಭ ದರದ ಆರೋಗ್ಯ ಸೇವೆ ಒದಗಿಸುವ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದೆ.
ದೇಶದ ಎಲ್ಲ ಜನರಿಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ರೀತಿಯಲ್ಲಿಯೇ ಆರೋಗ್ಯ ಗುರುತಿನ ಚೀಟಿ ವಿತರಿಸಲಾಗುತ್ತದೆ. ಪ್ರತಿಯೊಬ್ಬರ ಆರೋಗ್ಯದ ಮಾಹಿತಿಯನ್ನು ಇದು ಒಳಗೊಂಡಿದೆ. ಯಾವುದೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದ ಮತ್ತು ವೈದ್ಯಕೀಯ ವರದಿ ಅವರಿಗೆ ಇರುವ ಕಾಯಿಲೆಗಳು ಸೇರಿದಂತೆ ಎಲ್ಲಾ ಆರೋಗ್ಯದ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಮುಂದೆ ಯಾವುದೇ ವೈದ್ಯರನ್ನು ಭೇಟಿಯಾದ ಸಂದರ್ಭದಲ್ಲಿ ಕಾರ್ಡ್ ತೋರಿಸಿದರೆ ಅವರ ಆರೋಗ್ಯದ ಕುರಿತಾದ ಎಲ್ಲ ಮಾಹಿತಿ ಲಭ್ಯವಾಗಲಿದೆ. ಎಲ್ಲ ದಾಖಲೆಗಳನ್ನು ಕೊಂಡೊಯ್ಯುವ ಅಗತ್ಯ ಇರುವುದಿಲ್ಲ ಎಂದು ಹೇಳಲಾಗಿದೆ.