ಪುಣೆ: ಇತ್ತೀಚೆಗಷ್ಟೇ ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿ ಬಳಿಕ, ದೇಶದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ಪುಣೆ ಮೂಲದ ಜೋಡಿ ವಿವಾಹವಾಗಿದ್ದಾರೆ.
ಪುಣೆಯ ಅನಿಲ್ ನರಸಿಪುರಂ ಮತ್ತು ಶ್ರುತಿ ನಾಯರ್ ಬ್ಲಾಕ್‌ಚೈನ್ ಮೂಲಕ ವಿವಾಹವಾದವರು. ನವೆಂಬರ್ 15, 2021 ರಂದು ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಜೋಡಿ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಇದೀಗ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಪಡಿಸಲು ಅನಿಲ್ ಮತ್ತು ಅವರ ಪತ್ನಿ ಶ್ರುತಿ ನಾಯರ್ ತಮ್ಮ ಮದುವೆಯನ್ನು ಬ್ಲಾಕ್‌ಚೈನ್ ಮೂಲಕ ಅಧಿಕೃತವಾಗಿಸಿದ್ದಾರೆ.
ದಂಪತಿಯು ತಮ್ಮ ಲ್ಯಾಪ್‌ಟಾಪ್‌ಗಳ ಮುಂದೆ ಕುಳಿತು ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುತ್ತಿದ್ದರೆ, ಕುಟುಂಬಸ್ಥರು ಮತ್ತು ಸ್ನೇಹಿತರು ಗೂಗಲ್ ಮೀಟ್‌ನಲ್ಲಿ ವೀಕ್ಷಿಸಿದ್ದಾರೆ. ಇವರ ವಿವಾಹವನ್ನು ಡಿಜಿಟಲ್ ಪುರೋಹಿತ ಅನೂಪ್ ಪಕ್ಕಿ ನೆರವೇರಿಸಿದ್ದಾರೆ. 15 ನಿಮಿಷಗಳಲ್ಲಿ ವಿವಾಹೋತ್ಸವ ನೆರವೇರಿದೆ. ದಂಪತಿ ರಚಿಸಿದ ಎನ್‌ಎಫ್‌ಟಿಯು ಶ್ರುತಿ ಅವರ ನಿಶ್ಚಿತಾರ್ಥದ ಉಂಗುರದ ಫೋಟೋವಾಗಿದ್ದು, ಚಿತ್ರದ ಮೇಲೆ ಅವರ ಪ್ರತಿಜ್ಞೆಗಳನ್ನು ಬರೆಯಲಾಗಿದೆ.
ಶೃತಿ ಮತ್ತು ತಾನು ಮದುವೆಯನ್ನು ಎಥೆರಿಯಮ್ ಸ್ಮಾರ್ಟ್ ಒಪ್ಪಂದದೊಂದಿಗೆ ಬ್ಲಾಕ್‌ಚೈನ್ ಅಧಿಕೃತಗೊಳಿಸಿದ್ದೇವೆ ಎಂದು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈ ರೀತಿಯ ಮದುವೆ ಸರಿಯೇ ಎಂಬ ಬಗ್ಗೆ ಯಾರಿಗೂ ಯಾವುದೇ ಭರವಸೆಗಳನ್ನು ನೀಡುವುದಿಲ್ಲ. ಆದರೆ, ನಾವು ಈ ನಿರ್ಧಾರಕ್ಕೆ ಬರಲು ಸಾಕಷ್ಟು ಯೋಚನೆ ನಡೆಸಿದ್ದೆವು. ನಮ್ಮ ನಡುವೆಯೂ ಹಲವಾರು ಭಿನ್ನಾಭಿಪ್ರಾಯಗಳು ಬಂದವು. ಆದರೂ ನಾವು ಈ ನಿರ್ಧಾರಕ್ಕೆ ಬಂದೆವು. ಇಡೀ ಜಗತ್ತು ನಮ್ಮನ್ನು ನೋಡಲಿ ಎಂಬ ಬಯಕೆ ನಮಗಿಲ್ಲ. ನಾವಿಬ್ಬರೂ ಪರಸ್ಪರರ ಜೊತೆಗಿದ್ದು, ಈ ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದೆವು ಎಂದು ವಿವಾಹದ ಪ್ರತಿಜ್ಞೆ ಮಾಡಿದ್ದಾರೆ.
